Kagawad

ಉಗಾರದ ಶ್ರೀ ಪದ್ಮಾವತಿ ದೇವಿ ಹೊಳೆಪೂಜೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು

Share

ದಸರಾ ಹಬ್ಬದ ಅಂಗವಾಗಿ ಕಾಗವಾಡ ತಾಲ್ಲೂಕಿನ ಉಗಾರ ಬುದ್ರುಕ ಗ್ರಾಮದ ಶ್ರೀ ಪದ್ಮಾವತಿ ದೇವಿಯ ಸಾವಿರಾರು ಸದ್ಭಕ್ತರ ಸಾನಿಧ್ಯದಲ್ಲಿ ಮೂರು ಗಂಟೆಗಳ ಕಾಲ ಕೃಷ್ಣಾ ನದಿಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸುವ ಹೊಳೆಪೂಜೆ ಕಾರ್ಯಕ್ರಮ ಬುಧವಾರ ಯಶಸ್ವಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ ಶ್ರೀ ಪದ್ಮಾವತಿ ದೇವಿ ಮಂದಿರದಲ್ಲಿ ವಿಶೇಷ ಪೂಜೆ ನಡೆದಿದ್ದು, ದೇವಸ್ಥಾನದ ಮುಖ್ಯಸ್ಥ ಶೀತಲಗೌಡ ಪಾಟೀಲ ಹಾಗೂ ಅವರ ಕುಟುಂಬ ಸದಸ್ಯರು ಸೇರಿದಂತೆ ಭಕ್ತರು ಸೇರಿಕೊಂಡು ಭವ್ಯ ಮೆರವಣಿಗೆಯೊಂದಿಗೆ ಕೃಷ್ಣಾ ನದಿಯವರೆಗೆ ಸಾಗಿದರು. ಈ ಮೆರವಣಿಗೆಯು ಸಡಗರ ಸಂಭ್ರಮದಿಂದ ನಡೆದಿದ್ದು, ಭಕ್ತರು ದೇವಿಯ ೩.೫ ಕಿಲೋಗ್ರಾಂ ತೂಕದ ಚಿನ್ನದ ಮೂರ್ತಿಗೆ ಹಾಲು, ತುಪ್ಪ, ಮೊಸರು, ಅಷ್ಠದ್ರವ್ಯಗಳು, ಶ್ರೀಫಳ ಮತ್ತು ಬೆಳೆಗಳಿಂದ ಅಭಿಷೇಕ ನೆರವೇರಿಸಿದರು.

ಹಿಂದಿನ ವರ್ಷಗಳಂತೆ ಎಲ್ಲಾ ವಸ್ತುಗಳನ್ನು ನದಿಗೆ ಅರ್ಪಿಸುವ ಬದಲು, ಸೋಂದಾ ಜೈನಮಠದ ಭಟ್ಟಾಕಲಂಕ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಈ ಬಾರಿ ಪಂಚಾಮೃತ ಅಭಿಷೇಕಕ್ಕೆ ಬಳಸಿದ ಹಾಲು, ತುಪ್ಪ, ಅಷ್ಠದ್ರವ್ಯಗಳನ್ನು ಮಾತ್ರ ನದಿಗೆ ಸಮರ್ಪಿಸಲಾಯಿತು. ನದಿಯ ಜಲಚರ ಜೀವಿಗಳಿಗೆ ಹಾನಿ ಉಂಟಾಗಬಾರದೆಂದು ಉಳಿದ ಸಕ್ಕರೆ, ಬೆಳೆ, ಶ್ರೀಫಳ ಮತ್ತು ಹಣ್ಣುಗಳನ್ನು ಸಂಗ್ರಹಿಸಿ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಯಿತು ಎಂದು ಶೀತಲಗೌಡ ಪಾಟೀಲ ತಿಳಿಸಿದರು. ಉಗಾರದ ಪದ್ಮಾವತಿ ದೇವಿಯು ಸುಮಾರು ೪೦೦ ವರ್ಷಗಳ ಇತಿಹಾಸವನ್ನು ಹೊಂದಿದ್ದು, ವಿಜಯದಶಮಿ ಮತ್ತು ಖಂಡೆನವಮಿ ದಿನಗಳಲ್ಲಿ ನದಿಗೆ ಪೂಜೆ ಸಲ್ಲಿಸುವ ಪರಂಪರೆ ಇಂದಿಗೂ ಮುಂದುವರಿದಿದೆ. ಈ ಪವಿತ್ರ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಬಂದ ಝಾಂಜಪಥಕಗಳು, ಕರಡಿಮಜಲು, ಶಹನಾಯಿ ವಾದನ, ವಿವಿಧ ವಾದ್ಯವೃಂದಗಳು, ಎರಡು ಅಶ್ವಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ದೇವಿಯ ಪಲ್ಲಕ್ಕಿ ಮೆರವಣಿಗೆ ಭವ್ಯವಾಗಿ ಜರುಗಿತು.

ಸಾವಿರಾರು ಶ್ರಾವಕ-ಶ್ರಾವಿಕೆಯರು ನೂರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಆಗಮಿಸಿ ಹೋಳೆಪೂಜೆಯಲ್ಲಿ ಪಾಲ್ಗೊಂಡರು. ಪೂಜಾ ವಿಧಿಯನ್ನು ದೇವಸ್ಥಾನದ ಅರ್ಚಕ ಅಶೋಕ ಉಪಾಧ್ಯೆ ನೆರವೇರಿಸಿದರು. ಸೇವಾ ಸಮಿತಿಯ ಸದಸ್ಯರು ಮತ್ತು ಭಕ್ತರ ಸಹಕಾರದಿಂದ ಹೊಳೆಪೂಜೆ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು.

Tags:

error: Content is protected !!