ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ. ಈ ಬಗ್ಗೆ ಕೃಷಿ ವಿವಿಗಳು ಹೆಚ್ಚಿನ ಅಧ್ಯಯನ ನಡೆಸಿ ಪರಿಹಾರ ಹುಡುಕಿ ರೈತಸ್ನೇಹಿ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಸೋಮವಾರ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ, ಶ್ರೇಷ್ಠ ಕೃಷಿಕ ಮತ್ತು ಕೃಷಿ ಮಹಿಳೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ ಅವರು, ಸ್ವಾತಂತ್ರ್ಯದ ಹೊಸ್ತಿಲಲ್ಲಿ ಆಹಾರ ಉತ್ಪಾದನೆಯಲ್ಲಿ ಹಿಂದೆ ಇದ್ದೆವು. ಬಳಿಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭನೆ ಬೆಳೆಸಿಕೊಂಡು ರಫ್ತು ಮಾಡುವುದರಲ್ಲೂ ಮುಂದೆ ಬಂದೆವು. ಆದರೆ, ಇತ್ತೀಚಿಗೆ ಆಹಾರದ ಫಲವತ್ತತೆ ಕಡಿಮೆ ಆಗುತ್ತಾ ಆಹಾರ ಉತ್ಪಾದನಾ ಪ್ರಮಾಣ ಕಡಿಮೆ ಆಗಿದೆ. ಇದನ್ನು ಕೃಷಿ ವಿವಿಗಳು ಗಂಭೀರವಾಗಿ ಪರಿಗಣಿಸಬೇಕು. ಜನಸಂಖ್ಯೆ ಬೆಳೆದ ಪ್ರಮಾಣದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ. ಇದು ಕೃಷಿಮೇಳ ಮೇಳ ಅಲ್ಲ ರೈತ ಮೇಳವಾಗಿದೆ. ಇದಕ್ಕೆ ಸ್ಪಷ್ಟ ಕಾರಣಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ದಿಕ್ಕಿನಲ್ಲಿ ಕೃಷಿ ವಿವಿಗಳು ಹೆಚ್ಚೆಚ್ಚು ಅಧ್ಯಯನ ನಡೆಸಬೇಕು. ಇದಕ್ಕೆ ಅಗತ್ಯವಾದ ಹಣಕಾಸಿನ ನೆರವನ್ನು ಸಂಪೂರ್ಣವಾಗಿ ಒದಗಿಸಲು ಸರ್ಕಾರ ಸಿದ್ಧವಿದೆ. ನಮ್ಮ ಸರಕಾರದಲ್ಲಿ ಕೃಷಿಗೆ ಆದ್ಯತೆ ನೀಡಿದ್ದೇವೆ. ರೈತರಿಗೆ ಸಾಲ, ಗೊಬ್ಬರ, ಬೀಜ, ಕೃಷಿ ಯಂತ್ರೋಪಕರಣಗಳ ವಿತರಣೆ, ಹೊಸ ತಳಿಗಳ ಸಂಶೋಧನೆಗೆ ಸಹಕಾರ ನೀಡುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ರಾಷ್ಟ್ರಕ್ಕೆ ಎರಡನೆಯ ಸ್ಥಾನದಲ್ಲಿದೆ. ಒಂದು ಕೋಟಿ ಲೀಟರ್ ಹಾಲನ್ನು ಪ್ರತಿದಿನ ಉತ್ಪಾದಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಕ್ಕೆ ನಂಬರ ಒನ್ ರಾಜ್ಯವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ರೈತರಿಗೆ ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸದ್ಯದಲ್ಲೇ ಗುಜರಾತ್ ರಾಜ್ಯವನ್ನು ಹಿಂದಿಕ್ಕಿ ನಾವೇ ನಂಬರ್ ಒನ್ ಆದರೂ ಆಶ್ಚರ್ಯವಿಲ್ಲ. ಹೈನುಗಾರಿಕೆಯಲ್ಲಿ ನಾವು ಅಪಾರ ಪ್ರಗತಿ ಸಾಧಿಸಿದ್ದೇವೆ ಎಂದ ಅವರು, ಕೃಷಿ ವಿವಿಗಳು ಲ್ಯಾಬ್ ಟು ಲ್ಯಾಂಡ್ ಜೊತೆಗೆ ಲ್ಯಾಂಡ್ ಟು ಲ್ಯಾಬ್ ಕಡೆಗೆ ಗಮನ ಹರಿಸುವ ಕೆಲಸ ಮಾಡಬೇಕು. ಕಡಿಮೆ ಮಳೆಯಲ್ಲೂ ಉತ್ತಮ ಬೆಳೆ ಬೆಳೆಯುವ ರೀತಿ ಸುಸ್ಥಿರ ಕೃಷಿಗೆ ಪೂರಕವಾಗಿ ಅಧ್ಯಯನಗಳು ನಡೆಯಬೇಕು ಎಂದು ಕೃಷಿ ವಿವಿಗಳಿಗೆ ಕರೆ ನೀಡಿದರು.