ಭೀಮಾತೀರದ ರಕ್ತಚರಿತ್ರೆಯಲ್ಲಿ ಮತ್ತೊಂದು ಅಧ್ಯಾಯ ಎಂಬಂತೆ ದೇವರ ನಿಂಬರಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮನಗೌಡ ಬಿರಾದಾರ್ ಅವರನ್ನು ಗುಂಡಿಕ್ಕಿ ಮತ್ತು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಇದೀಗ ಪಿ.ಎಸ್.ಐ. ಯನ್ನು ಕರ್ತವ್ಯಲೋಪದಡಿ ಸಸ್ಪೆಂಡ್ ಮಾಡಲಾಗಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ನಿಂಬರಗಿ ಗ್ರಾಮ ಪಂಚಾಯಿತಿ ಸದಸ್ಯ ಭೀಮನಗೌಡ ಬಿರಾದಾರ್ ಗುಂಡಿಕ್ಕಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಚಡಚಣ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಅವರನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ. ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಇದೇ ಮಂಗಳವಾರ ಬೆಳಗ್ಗೆ 8:30 ರಿಂದ 8:45ರ ಸುಮಾರಿಗೆ ನಡೆದಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಹತ್ಯೆಯನ್ನು ಖಚಿತಪಡಿಸಿದ್ದರು. ಈ ಘಟನೆ ಸೆಪ್ಟೆಂಬರ್ 3ರಂದು ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಬೆಳಗ್ಗೆ ಕಟಿಂಗ್ ಶಾಪ್ಗೆ ಬಂದಿದ್ದ ಭೀಮನಗೌಡನ ಮೇಲೆ ನಾಲ್ವರು ದುಷ್ಕರ್ಮಿಗಳಾದ ರಜೀವುಲ್ಲಾ ಮಕಾನದಾರ್, ವಾಸೀಂ ಮನಿಯಾರ್, ಪಿರೋಜ್ ಶೇಖ್ ಮತ್ತು ಮೌಲಾಸಾಬ್ ಖಾರದ ಪುಡಿ ಎರಚಿ, ಕಂಟ್ರಿ ಪಿಸ್ತೂಲ್ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ನಾಲ್ಕೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳ ಪ್ರಕಾರ, ಭೀಮನಗೌಡ ಅವರಿಂದ ತಮಗೆ ಅನ್ಯಾಯವಾಗಿದೆ ಎಂದು ಬಾಯಿಬಿಟ್ಟಿದ್ದಾರೆ. ಈ ಪ್ರಕರಣದ ಹಿಂದೆ ರಾಜಕೀಯ, ಆರ್ಥಿಕ ಹಾಗೂ ವೈಯಕ್ತಿಕ ದ್ವೇಷಗಳಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರು.
ಆದರೆ, ಈ ಘಟನೆ ಭೀಮಾತೀರದಲ್ಲಿ ಮತ್ತೆ ರಕ್ತಪಾತದ ಆತಂಕ ಮೂಡಿಸಿತ್ತು. ಕಳೆದ ಹಲವು ವರ್ಷಗಳಿಂದ ನಿಂತಿದ್ದ ಗ್ಯಾಂಗ್ಸ್ಟರ್ ವಾರ್ ಮತ್ತೆ ಶುರುವಾಗುವ ಸಾಧ್ಯತೆಯಿದೆ ಎಂದು ಭೀಮಾತೀರದ ನಿವಾಸಿಗಳು ಭಯಗೊಂಡಿದ್ದರು. ಇಂತಹ ಗಂಭೀರ ಪ್ರಕರಣವನ್ನು ತಡೆಯುವಲ್ಲಿ ವಿಫಲರಾದ ಆರೋಪದ ಮೇಲೆ ಸ್ಥಳೀಯ ಪಿಎಸ್ಐ ಪ್ರವೀಣ್ ವಿರುದ್ಧ ಕ್ರಮ ಜರುಗಿಸಲಾಗಿದೆ. ಈ ಹಿಂದೆ, ಭೀಮನಗೌಡ ಬಿರಾದಾರ್ ಹತ್ಯೆಗೆ ಭೀಮಾತೀರದ ಮತ್ತೊಬ್ಬ ಕುಖ್ಯಾತ ಗ್ಯಾಂಗ್ಸ್ಟರ್ಗೆ ಸಂಬಂಧವಿರಬಹುದೆಂದು ಶಂಕೆ ವ್ಯಕ್ತವಾಗಿತ್ತು. ಇತ್ತೀಚೆಗೆ ಕಾರಾಗೃಹದಿಂದ ಹೊರಬಂದಿದ್ದ ವಿಜಯಪುರದ ಮತ್ತೊಬ್ಬ ಅಪರಾಧಿ ಸಹ ಭೀಮನಗೌಡ ಹತ್ಯೆಯಲ್ಲಿ ಭಾಗಿಯಾಗಿರುವ ಬಗ್ಗೆ ಆಂತರಿಕ ಮಾಹಿತಿ ಇತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ, ಪೊಲೀಸರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಈ ಕೊಲೆಯ ಹಿಂದೆ ಇರುವ ದೊಡ್ಡ ಮಟ್ಟದ ಪಿತೂರಿಯನ್ನು ಭೇದಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.