ಬೆಳಗಾವಿಯಿಂದ ಕೇವಲ 20 ಕಿ.ಮೀ. ಅಂತರದಲ್ಲಿದೆ ಕಿಟವಾಡ ಫಾಲ್ಸ್ ನಿಸರ್ಗ ಪ್ರಿಯರ ಸ್ವರ್ಗ :ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆ ಆಗುತ್ತಿದೆ. ಇದರಿಂದ ಇಲ್ಲಿನ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಅದರಲ್ಲಿ ಬೆಳಗಾವಿ ಸಮೀಪದಲ್ಲೆ ಇರುವ ಕಿಟವಾಡ ಫಾಲ್ಸ್ ನಿಸರ್ಗ ಪ್ರಿಯರ ಸ್ವರ್ಗ ಎಂದರೂ ಅತಿಶಯೋಕ್ತಿ ಆಗದು.

ಸುತ್ತಲೂ ಹಚ್ಚ ಹಸಿರಿನ ಗುಡ್ಡ. ಗುಡ್ಡದಿಂದ ಹರಿದು ಬರುವ ನೀರು ಚೆಕ್ ಡ್ಯಾಮ್ನಲ್ಲಿ ಸಂಗ್ರಹವಾಗಿರುವುದು. ಅಲ್ಲಿಂದ ನಿಧಾನವಾಗಿ ಬಂದು ಬಳಿಕ ಧುಮ್ಮಿಕ್ಕಿ ಹರಿಯುವ ಜಲಧಾರೆ ನೋಡಲು ಎರಡೂ ಕಣ್ಣು ಸಾಲದು. ಇದು ಕಿಟವಾಡ ಫಾಲ್ಸ್ ಜಲವೈಭವ. ಭಾನುವಾರ ವೀಕೆಂಡ್ ಹಿನ್ನೆಲೆ ಪ್ರವಾಸಿಗರ ದಂಡು ಇಲ್ಲಿಗೆ ಹರಿದು ಬಂದಿತ್ತು. ಬೆಳಗಾವಿಯಿಂದ ಕೇವಲ 20 ಕಿ.ಮೀ. ಅಂತರದಲ್ಲಿದೆ ಈ ಕಿಟವಾಡ ಫಾಲ್ಸ್. ಇದು ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲೂಕಿನಲ್ಲಿ ಬರುತ್ತದೆ. ಕಡಿದಾದ ಕಲ್ಲಿನ ನಡುವೆ ಹಾಲ್ನೊರೆಯಂತೆ ಹರಿದು ಬರುವ ಫಾಲ್ಸ್ ಕೆಳಗೆ ನಿಂತು ಯುವಕ – ಯುವತಿಯರು ಎಂಜಾಯ್ ಮಾಡಿದರು. ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಇನ್ನೂ ಕೆಲ ಯುವಕರು ಚೆಕ್ ಡ್ಯಾಮ್ನಲ್ಲಿ ಈಜು ಹೊಡೆದು ಸಾಹಸ ಪ್ರದರ್ಶಿಸಿದರು.
ಬೆಳಗಾವಿಯಿಂದ ಕಂಗ್ರಾಳಿ ಕೆಎಚ್, ಅಲತವಾಡ ಕ್ರಾಸ್, ಅಗಸಗಿ, ಚಲುವೇನಹಟ್ಟಿ, ಹಂದಿಗನೂರು ಮಾರ್ಗವಾಗಿ ಕಿಟವಾಡ ಫಾಲ್ಸ್ಗೆ ಹೋಗಬೇಕಾಗುತ್ತದೆ. ಹಂದಿಗನೂರು ಕರ್ನಾಟಕದ ಕೊನೆ ಗ್ರಾಮ. ಹಂದಿಗನೂರಿನಿಂದ ಕೇವಲ 5 ಕಿ.ಮೀ. ಅಂತರದಲ್ಲಿ ಈ ಕಿಟವಾಡ ಫಾಲ್ಸ್ ಇದೆ. ಕುಂದಾನಗರಿ ಮಂದಿಗಂತೂ ಕೇವಲ ಅರ್ಧ ಗಂಟೆ ಪ್ರಯಾಣ.
:ಫಾಲ್ಸ್ ಕೆಳಗೆ ಹೋಗಲು ಪ್ರವಾಸಿಗರು ಹರಸಾಹಸ ಪಡುವ ಸ್ಥಿತಿಯಿದೆ. ಅಲ್ಲದೇ ಕಾಲು ಜಾರಿ ಬಿದ್ದು ಗಾಯವಾಗುವ ಸಾಧ್ಯತೆಯೂ ಹೆಚ್ಚಿದೆ. ಮೆಟ್ಟಿಲು ವ್ಯವಸ್ಥೆ ಮಾಡಿದರೆ ಪ್ರವಾಸಿಗರಿಗೆ ತುಂಬಾ ಅನುಕೂಲ ಆಗಲಿದೆ. ಮೆಟ್ಟಿಲು ಇಲ್ಲದ್ದರಿಂದ ಅದೇಷ್ಟೋ ಮಂದಿ ಮೇಲಿನಿಂದಲೇ ಫಾಲ್ಸ್ ನೋಡಿ ಬೇಸರದಿಂದ ಹೋಗುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೇ ಫಾಲ್ಸ್ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಆದರೆ, ಯಾವುದೇ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಿಲ್ಲ ಎಂಬುದು ಪ್ರವಾಸಿಗರ ದೂರು ಕಿಟವಾಡ ಫಾಲ್ಸ್ ಮೇಲಿನಿಂದ ವೀಕ್ಷಿಸುವಾಗ ಕಾಲು ಜಾರಿ ಬಿದ್ದು ಅನೇಕರು ಜೀವ ಕಳೆದುಕೊಂಡಿದ್ದಾರೆ. ಹಾಗಾಗಿ, ಸುರಕ್ಷಿತ ಅಂತರ ಕಾಪಾಡುವುದು ಒಳ್ಳೆಯದು. ಹುಚ್ಚು ಸಾಹಸ ಪ್ರದರ್ಶಿಸಲು ಹೋಗಿ ಜೀವ ಕಳೆದುಕೊಂಡರೆ ನಿಮ್ಮ ಜೀವಕ್ಕೆ ನೀವೆ ಹೊಣೆ ಎಂಬುದನ್ನು ಯಾರೂ ಮರೆಯಬಾರದು