ಶ್ರೀರಾಮ ಸೇನೆ ಧಾರವಾಡ ಜಿಲ್ಲಾಧ್ಯಕ್ಷನ ಮೇಲೆ ಬೆಳಗಾವಿ ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಕ್ಷುಲ್ಲಕ ವಿಚಾರವಿಟ್ಟಕೊಂಡು ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ಹಾಗೂ ಹಲ್ಲೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಧಾರವಾಡದಲ್ಲಿ ಶ್ರೀ ರಾಮ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹಿರಹಾಕಿದರು.
ಶ್ರೀರಾಮ ಸೇನೆ ಸಂಘಟನೆ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಯಲ್ಲಮ್ಮನ ಗುಡ್ಡದ ಹೋಮ್ ಗಾರ್ಡ್ ಹಾಗೂ ಸವದತ್ತಿ ಪೊಲೀಸ ಪೇದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ ಅವರು ತೆರಳಿದ್ದರು.
ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಪೊಲೀಸರು ಮತ್ತು ಅಣ್ಣಪ್ಪನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಪೊಲೀಸ್ ಪೇದೆ ಹಾಗೂ ಹೋಮ್ ಗಾರ್ಡ್ ಕೂಡಿ ಅಣ್ಣಪ್ಪನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಅಣ್ಣಪ್ಪ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಪೇದೆ ಹಾಗೂ ಹೋಮ್ ಗಾರ್ಡ್ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅವರು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ನಿರ್ಲಕ್ಷ್ಯ ತೋರಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಗೃಹ ಸಚಿವರಿಗೆ ಎಚ್ಚರಿಕೆ ನೀಡಿದರು.