ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಲಾಗಿದೆ. ನಿನ್ನೆ ರಾತ್ರಿ ಪೀಠಕ್ಕೆ ಬೀಗ ಹಾಕಿರುವ ಮಾಹಿತಿ ಲಭ್ಯವಾಗಿದ್ದು, ಬೀಗ ಹಾಕಿದ್ದು ಯಾರು? ಯಾಕೆ? ಎನ್ನುವುದು ನಿಗೂಢವಾಗಿದೆ.
ಕೂಡಲಸಂಗಮ ಪಂಚಮಸಾಲಿ ಪೀಠದ ವಿಚಾರ ಬುಗಿಲೆದ್ದಿದೆ. ಕಳೆದ ಕೆಲವು ದಿನಗಳ ಹಿಂದೆ ಶುರುವಾಗಿದ್ದ ಹೊಸ ಪೀಠದ ಚರ್ಚೆ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಪ್ರಸಂಗ ಬಂದರೆ ಪೀಠಾಧ್ಯಕ್ಷರನ್ನು ಬದಲಾವಣೆ ಮಾಡ್ತೀವಿ ಅಂತ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದರು. ಇದೀಗ ಪೀಠಕ್ಕೆ ಬೀಗ ಹಾರಕಿರೋದು ಹಲವು ಚರ್ಚೆಗೆ ಗ್ರಾಸವಾಗಿದೆ. ಸದ್ಯ ವಿಜಯಾನಂದ ಕಾಶಪ್ಪನವರ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ಕೂಡಲಸಂಗಮ ಪಂಚಮಸಾಲಿ ಟ್ರಸ್ಟ್ ನೂತನ ಅಧ್ಯಕ್ಷರಾಗಿದ್ದಾರೆ. ಇತ್ತೀಚಿಗೆ ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರವಾಗಿ ವಿಜಯಾನಂದ ಕಾಶಪ್ಪನವರ್ ಹಾಗೂ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಡುವೆ ವೈಮನಸ್ಸು ಉಂಟಾಗಿತ್ತು.
ಸ್ವಾಮೀಜಿಗಳಿಗೆ ಖಾವಿ ಬೇಡವಾಗಿದೆ, ಖಾದಿ ಬೇಕಾಗಿದೆ. ಬರುವ ದಿನಗಳಲ್ಲಿ ಯತ್ನಾಳ್ ಜೊತೆ ಸೇರಿ ಲೋಕಸಭೆ ಚುನಾವಣೆಗೆ ನಿಲ್ಲುವವರಿದ್ದಾರೆ. ಹೀಗಾಗಿ ಸ್ವಾಮೀಜಿಗಳು ಅವರ ಬೆನ್ನು ಬಿದ್ದಿದ್ದಾರೆ ಅಂತ ವಿಜಯಾನಂದ ಕಾಶಪ್ಪನವರ್ ಆರೋಪಿಸಿದ್ದರು. ವ್ಯಕ್ತಿಯ ಹಿಂದೆ ಹೋಗೋದು ಸರಿಯಲ್ಲ. ವ್ಯಕ್ತಿಯ ವೈಯಕ್ತಿಕ ವಿಚಾರಕ್ಕೆ ಸ್ವಾಮೀಜಿಗಳನ್ನು ನೇಮಿಸಿಲ್ಲ. ಗುರುಗಳಾದಂಥವರು ಸಮಾನವಾಗಿ ನಡೆದುಕೊಳ್ಳಬೇಕು. ಎಲ್ಲರೂ ಕೂಡಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಲ್ಲರಿಗೂ ಸೇರಿದ್ದು ಅಂತ ಕಾಶಪ್ಪನವರ್ ಹೇಳಿದ್ದರು.
ಅತ್ತ ಗದಗ ಜಿಲ್ಲೆಯ ಮಲಪ್ರಭಾ ತೀರದಲ್ಲಿ ಹೊಸ ಪಂಚಮಸಾಲಿ ಪೀಠ ಕಟ್ಟಿಸಿಕೊಡುತ್ತೇವೆ ಅಂತ ಮಾಜಿ ಸಚಿವ ಸಿಸಿ ಪಾಟೀಲ್ ಹೇಳಿದ್ದರು. ಕೂಡಲಸಂಗಮದ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರನ್ನೇ ಗದಗದಲ್ಲೂ ಪೀಠಾಧಿಪತಿ ಮಾಡೋದಾಗಿ ಸಿಸಿ ಪಾಟೀಲ್ ಹೇಳಿದ್ದರು. ಸದ್ಯ ಪೀಠಕ್ಕೆ ಬೀಗ ಹಾಕಿದ್ದು ಯಾರು? ಯಾಕೆ ಎಂಬ ವಿಚಾರಗಳು ಇನ್ನೂ ನಿಗೂಢವಾಗಿದ್ದು, ಭಾರೀ ಚರ್ಚೆ ಹುಟ್ಟುಹಾಕಿದೆ. ಸದ್ಯ ಪೀಠದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇನ್ನು ಪೀಠದ ಗೇಟ್ ಮುರಿದು ಅನಧಿಕೃತ ಪ್ರವೇಶ ಮಾಡಲಾಗಿದೆ ಎಂಬ ಆರೋಪದ ಮೇಲೆ ನಾಲ್ವರು ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ.
ಪಂಚಮಸಾಲಿ ಪೀಠದಲ್ಲಿ ನಿರಂತರ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಪೀಠದ ಟ್ರಸ್ಟ್ನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರ ಸೂಚನೆಯ ಮೇರೆಗೆ ಟ್ರಸ್ಟನ ವ್ಯವಸ್ಥಾಪಕ ಚಂದ್ರಶೇಖರ್ ಚಿತ್ತರಗಿ ಪೀಠಕ್ಕೆ ಬೀಗ ಹಾಕಿದ್ದರು. ಈ ಕ್ರಮದ ಬೆನ್ನಲ್ಲೇ ನಿನ್ನೆ ಸಂಜೆ ಮೃತ್ಯುಂಜಯ ಶ್ರೀಗಳ ಬೆಂಬಲಿಗರು ಮಠದ ಗೇಟ್ ಮುರಿದು ಅಕ್ರಮವಾಗಿ ಮಠದ ಒಳಗೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಟ್ರಸ್ಟನ ವ್ಯವಸ್ಥಾಪಕ ಚಂದ್ರಶೇಖರ್ ಚಿತ್ತರಗಿ ಅವರು ಹುನಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ್ಯುಂಜಯ ಶ್ರೀಗಳ ನಾಲ್ವರು ಬೆಂಬಲಿಗರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ. ಮಠದ ಆಂತರಿಕ ವಿವಾದಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಪೊಲೀಸರು ಪ್ರಸ್ತುತ ಪರಿಸ್ಥಿತಿಯ ಮೇಲ್ವಿಚಾರಣೆಯಲ್ಲಿ ತೊಡಗಿದ್ದಾರೆ. ಪೀಠದ ಗೌರವ ಹಾಗೂ ಶಾಂತಿ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.