ಗೋಕಾಕ್ ತಾಲೂಕು ಅನೇಕ ವಿಶೇಷತೆಗಳನ್ನು ಹೊಂದಿರುವ ನಾಡು. ಪ್ರಕೃತಿ ಸೌಂದರ್ಯಗಳೊಂದಿಗೆ ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯನ್ನು ಕೂಡ ಹೊಂದಿರುವ ಭೂಮಿ ಇದು. ಇಂದು ನಮ್ಮ ವರದಿಗಾರ ಶಾನೂಲ್ ಮತ್ತೇಖಾನ್ ಅವರು ನೀಡಿರುವ ಯೋಗಿಕೊಳ್ಳ ವಿಶೇಷ ವರದಿಯನ್ನು ನೋಡಿಕೊಂಡು ಬರೋಣ ಬನ್ನಿ.
ಗೋಕಾಕ್ ಯೋಗಿಕೊಳ್ಳವು ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಹತ್ತಿರ ಇರುವ ಒಂದು ಪುಟ್ಟ ಗ್ರಾಮ. ಇದು ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಗೋಕಾಕ್ ಜಲಪಾತದ ಸಮೀಪದಲ್ಲಿರುವ ಈ ಸ್ಥಳವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇಲ್ಲಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವು ಸುಮಾರು ಏಳರಿಂದ ಎಂಟು ತಲೆಮಾರುಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಹಿಂದೆ ಒಬ್ಬ ಗೋಪಾಲಕನು ತನ್ನ ಹಸುಗಳನ್ನು ಮೇಯಿಸಲು ಈ ಸ್ಥಳಕ್ಕೆ ಕರೆದುಕೊಂಡು ಬರುತ್ತಿದ್ದನು. ಪ್ರತಿದಿನವೂ ಆತನ ಒಂದು ಹಸು ಎಲ್ಲ ಹಸುಗಳ ಗುಂಪನ್ನು ಬಿಟ್ಟು ಒಂದೆಡೇ ಬಂದು ಹಾಲು ಸುರಿಸುತ್ತಿತ್ತು.
ಆಗ ಆತ ಹತ್ತಿರ ಹೋಗಿ ನೋಡಿದಾಗ ಅಲ್ಲೊಂದು ಸ್ವಯಂಭೂ ಶಿವಲಿಂಗ ಕಾಣಿಸಿತು. ಕಾಲಾಂತರದಲ್ಲಿ ಅಲ್ಲಿ ಮಲ್ಲಿಕಾರ್ಜುನ ದೇವಸ್ಥಾನವನ್ನು ಕಟ್ಟಲಾಯಿತು ಎಂಬ ಇತಿಹಾಸವಿದೆ. ಈ ದೇವಸ್ಥಾನಕ್ಕೆ ಸುಮಾರು 350 ಮೆಟ್ಟಿಲುಗಳಿವೆ. ಇದು ಒಂದು ಸುಂದರವಾದ ಸಣ್ಣ ಜಲಪಾತ ಮತ್ತು ಬಂಡೆಗಳ ನಡುವೆ, ಸ್ಪಷ್ಟ ಆಕಾಶದ ಅಡಿಯಲ್ಲಿ ಮತ್ತು ಹಸಿರಿನ ನಡುವೆ ಸುಂದರವಾದ ವಾತಾವರಣವನ್ನು ಹೊಂದಿದೆ. ದೇವಾಲಯದ ಶಿಖರದಿಂದ ಅದ್ಭುತವಾದ ವಿಹಂಗಮ ನೋಟವನ್ನು ಕಾಣಬಹುದು. ಪಕ್ಷಿಗಳ ಹಿತವಾದ ಕಲರವ, ಧುಮ್ಮಿಕ್ಕುವ ಜಲಪಾತಗಳು ಮತ್ತು ಎಲೆಗಳ ಸೌಮ್ಯವಾದ ಕಲರವದಲ್ಲಿ ಮುಳುಗಬಹುದು.
ಶ್ರಾವಣ ಮಾಸದ ನಾಲ್ಕನೇಯ ಸೋಮವಾರ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ಶ್ರೀ ಮಲ್ಲಿಕಾರ್ಜುನ ಸ್ವಾಮೀಯ ಪಲ್ಲಕ್ಕಿ ಉತ್ಸವಕ್ಕೆ ಸಾಕ್ಷಿಯಾಗುತ್ತಾರೆಂದು ದೇವಾಲಯದ ಅರ್ಚಕರು ಹೇಳಿದ್ದು ಹೀಗೆ. ಇನ್ನು ಇಲ್ಲಿಗೆ ಬರುವ ಭಕ್ತರು ಭಜನಾಪದಗಳನ್ನು ಹಾಡಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯನ್ನು ಆರಾಧಿಸುವುದು ವಾಡಿಕೆ. ಹಬ್ಬ ಉತ್ಸವಗಳಲ್ಲಿ ಮತ್ತು ಶ್ರಾವಣ ಸೋಮವಾರ ಸಹಕುಟುಂಬದೊಂದಿಗೆ ಬಂದು ದೇವರ ದರ್ಶನ ಪಡೆಯುತ್ತಾರೆ.
ಇನ್ನು ಇದು ದುರ್ಗಮ ದಟ್ಟಾರಣ್ಯವಾಗಿದ್ದು, ಮತ್ತಷ್ಟು ಅಭಿವೃದ್ಧಿಯನ್ನು ಪಡಿಸಿ, ಇಲ್ಲಿಗೆ ಬರುವಂತಹ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂಬ ಬೇಡಿಕೆ ಕೇಳಿ ಬಂದಿದೆ.