Chikkodi

ಕೆನರಾ ಬ್ಯಾಂಕಿನಿಂದ ಚಿಕ್ಕೋಡಿಯಲ್ಲಿ ಕೃಷಿ ಸಾಲ ಸೌಲಭ್ಯ ಹಾಗೂ ಮಹಿಳಾ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣೆ

Share

ಚಿಕ್ಕೋಡಿ-“ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾದರೆ ಕುಟುಂಬವಷ್ಟೇ ಅಲ್ಲದೇ ಇಡೀ ಗ್ರಾಮವೇ ಅಭಿವೃದ್ಧಿಯಾಗುತ್ತದೆ. ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಮಹಿಳೆಯರು ಆದಾಯ ಬರುವಂತಹ ಸ್ವ ಉದ್ಯೋಗ ಕೈಗೊಳ್ಳಬೇಕು” ಎಂದು ಕೆನರಾ ಬ್ಯಾಂಕಿನ ಬೆಂಗಳೂರಿನ ಮುಖ್ಯ ಕಚೇರಿಯ ಆದ್ಯತಾ ವಲಯ ಮಹಾ ಪ್ರಬಂಧಕರಾದ ಮಮತಾ ಎ ಜೋಶಿ ಹೇಳಿದರು.

ಚಿಕ್ಕೋಡಿ ಪಟ್ಟಣದ ಕೇಶವ ಕಲಾಭವನದಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಚಿಕ್ಕೋಡಿ, ಚಿಕ್ಕೋಡಿ ತಾಲ್ಲೂಕು ಪಂಚಾಯಿತಿ, ನಬಾರ್ಡ್, ಎನ್ ಆರ್ ಇ ಜಿ ಎ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೃಷಿ ಸಾಲ ಸೌಲಭ್ಯ ಹಾಗೂ ಮಹಿಳಾ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ”ರಾಜ್ಯದ ವಿವಿಧೆಡೆ ಮಹಿಳಾ ಸ್ವ ಸಹಾಯ ಸಂಘಗಳು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಚಿಕ್ಕೋಡಿಯಲ್ಲು ಬ್ಯಾಂಕಿನ ಸಾಲ ಪಡೆದು ಆರ್ಥಿಕವಾಗಿ ಶ್ರೇಯೋಭಿವೃದ್ಧಿ ಹೊಂದಬೇಕು” ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆನರಾ ಬ್ಯಾಂಕಿನ ಹುಬ್ಬಳ್ಳಿ ವೃತ್ತ ಕಚೇರಿಯ ಮಹಾ ಪ್ರಬಂಧಕ ವೀರೇಂದ್ರ ಬಾಬು ಕೆ ಮಾತನಾಡಿ, “120 ವರ್ಷಗಳ ಹಿಂದೆ ಅಮ್ಮೆಬಾಲ ಸುಬ್ಬರಾವ ಪೈ ಅವರು ಕೆನರಾ ಬ್ಯಾಂಕನ್ನು ಸಾಕಷ್ಟು ಪರಿಶ್ರಮವಹಿಸಿ ಕಟ್ಟಿದ್ದಾರೆ. ಇಂದು ಅದು ಬೆಳೆದು ಹೆಮ್ಮರವಾಗಲು ಗ್ರಾಹಕರಾದ ತಮ್ಮ ಪಾತ್ರ ಬಹಳಷ್ಟಿದೆ. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಕೆನರಾ ಬ್ಯಾಂಕ್ 386 ಶಾಖೆಗಳನ್ನು ಹೊಂದಿದ್ದು, ಈ ಶಾಖೆಗಳಲ್ಲಿ ಒಟ್ಟು 67 ಸಾವಿರ ಕೋಟಿ ವ್ಯವಹಾರ ಹೊಂದಿದೆ” ಎಂದು ಹೆಮ್ಮೆಪಟ್ಟರು.

ಚಿಕ್ಕೋಡಿ ಪ್ರಾದೇಶಿಕ ಕಚೇರಿ ವ್ಯಾಫ್ತಿಯ ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ ಹಾಗೂ ರಾಯಬಾಗ ತಾಲ್ಲೂಕು ವ್ಯಾಪ್ತಿಯ ವಿವಿಧ ಮಹಿಳಾ ಸ್ವ ಸಹಾಯ ಸಂಘಗಳಿಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸಾಲಗಳ ಪತ್ರಗಳನ್ನು ಗ್ರಾಹಕರಿಗೆ ವಿತರಿಸಲಾಯಿತು. ಪ್ರಾರಂಭದಲ್ಲಿ ಕೆನರಾ ಬ್ಯಾಂಕಿನ ಚಿಕ್ಕೋಡಿಯ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಎಂ ಫಣಿಶಯನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸುಜಲ ಪ್ರಶಾಂತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸಾಲದ ಯೋಜನೆಗಳ ಕುರಿತು ಗ್ರಾಹಕರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೆನೆರಾ ಬ್ಯಾಂಕಿನ ಸಿಎಂಎಲ್ಡಿಎಮ್ ಪ್ರಶಾಂತ ಘೋಡಕೆ, ಚಿಕ್ಕೋಡಿ ತಾಲ್ಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ರಾಜೇಂದ್ರ ಮೈಗೂರ, ವಿಷಯ ನಿರ್ವಾಃಕ ಲಕ್ಷ್ಮೀಕಾಂತ ಉಪ್ಪಾರ, ಹುಬ್ಬಳ್ಳಿಯ ವೃತ್ತ ಕಚೇರಿಯ ಮಹಾಪ್ರಬಂಧಕ ಎಸ್ ಕೆ ವಿಮಲ, ಲೋಕೇಶ ಹಂಚಿನಾಳ, ರಂಜಿತ ಕಾರ್ಣಿಕ, ಬಸವರಾಜ ಕೊಟಬಾಗಿ, ಆರ್ಥಿಕ ಸಾಕ್ಷರತೆ ಕಚೇರಿಯ ವಿಜಯ ವಾಘಮೋರೆ, ಅಂದಾನಿ ಪ್ರಸನ್ನ ಇತರರು ಇದ್ದರು.

Tags:

error: Content is protected !!