ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರ ಮಹತ್ವದ ಘಟಕ್ಕೆ ತಲುಪಿದೆ. ಸಿಎಂ ಸಿದ್ದರಾಮಯ್ಯ ಅವರು ನಾನೇ 5 ವರ್ಷ ಪೂರ್ಣಾವಧಿ ಸಿಎಂ ಎಂದು ಮತ್ತೆ ಗುಟುರು ಹಾಕಿದ್ದಾರೆ.
ದೆಹಲಿಯಲ್ಲಿ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನನ್ನ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ಬ್ರೇಕ್ ಹಾಕುವ ಪ್ರಯತ್ನ ನಡೆಸಿದ್ದಾರೆ. ಹೈಕಮಾಂಡ್ ಭೇಟಿ ಮುನ್ನ ಸುದ್ದಿಗೋಷ್ಠಿ ಮಾಡಿದ ಸಿದ್ದರಾಮಯ್ಯ, ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ಇಲ್ಲ. ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ. “ಕಾಂಗ್ರೆಸ್ ಹೈಕಮಾಂಡ್ ತಮಗೆ ರಾಜೀನಾಮೆ ನೀಡುವಂತೆ ಅಥವಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದಾರಿ ಮಾಡಿಕೊಡುವಂತೆ ಕೇಳಿದೆ ಎಂಬ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.“ನಾನು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತೇನೆ. ಇದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಜುಲೈ 2 ರಂದು ಸಹ ನಾನು ಈ ಬಗ್ಗೆ ಸ್ಪಷ್ಟವಾದ ಹೇಳಿಕೆಯನ್ನು ನೀಡಿದ್ದೆ. ಡಿ.ಕೆ. ಶಿವಕುಮಾರ್ ಕೂಡ ಅಲ್ಲೇ ಇದ್ದರು” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
“ಒಂದು ವರ್ಷದ ನಂತರವೂ ನಾನೇ ಈ ಕುರ್ಚಿಯಲ್ಲಿರುತ್ತೇನೆ. ಡಿ.ಕೆ. ಶಿವಕುಮಾರ್ ಕೂಡ ಆಕಾಂಕ್ಷಿ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಕುರ್ಚಿ ಈಗ ಖಾಲಿ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ,” ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. ಈ ಮೂಲಕ, ರಾಜ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದ್ದ ಚರ್ಚೆಗಳಿಗೆ ಸಿದ್ದರಾಮಯ್ಯ ತಮ್ಮ ಹೇಳಿಕೆಯ ಮೂಲಕ ತೆರೆ ಎಳೆದಿದ್ದಾರೆ.