‘ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಜಿಲ್ಲೆ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದ ಸತ್ಯ ಮತ್ತು ವಾಸ್ತವಿಕ ವಿಷಯವನ್ನು ಗಮನಕ್ಕೆ ತಂದಿದ್ದೇನೆ. ಚುನಾವಣೆ ಪೂರ್ವದಲ್ಲಿ ನನಗೆ ಕೊಟ್ಟ ಮಾತನ್ನು ಅವರಿಗೆ ನೆನಪಿಸಿದ್ದೇನೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರಾ? ನೀವು ಸಚಿವರಾಗುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಪಕ್ಷದ ಹೈಕಮಾಂಡ್ ಹಾಗೂ ಶಾಸಕರು ಎಲ್ಲವನ್ನೂ ತೀರ್ಮಾನಿಸಲಿದ್ದಾರೆ. ನಾನು ಸನ್ಯಾಸಿ ಅಲ್ಲ ಆಕಾಂಕ್ಷೆಗಳಿವೆ’ ಎಂದು ಮಾರ್ಮಿಕವಾಗಿ ಹೇಳಿದರು. ‘ಸುರ್ಜೇವಾಲ ಅವರು ಪಕ್ಷದಲ್ಲಿ ಆಂತರಿಕ ಸಭೆ ನಡೆಸುತ್ತಿರುವುದು ಬಹಳ ಸ್ವಾಗತಾರ್ಹ ಕೆಲಸ. ಶಾಸಕರ ಆಹವಾಲುಗಳಿಗೆ ಪರಿಹಾರ ಸಿಗುವ ನಿರೀಕ್ಷೆ ಇದೆ’ ಎಂದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಒಬ್ಬ ಪರಿಪೂರ್ಣ ರಾಜಕಾರಣಿಯಾಗಿದ್ದಾರೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಘಟನಾ ಚತುರ ಇದ್ದಾರೆ’ ಎಂದು ಬಣ್ಣಿಸಿದರು. ಇನ್ನೂ ಐತಿಹಾಸಿಕ ವಿಜಯಪುರವನ್ನು ವಿಶ್ವ ಪ್ರಸಿದ್ಧ
ಪ್ರವಾಸಿ ಕೇಂದ್ರ(ಟೂರಿಜಂ ಹಬ್)ವಾಗಿ ಅಭಿವೃದ್ಧಿ ಮಾಡುವ ಅವಕಾಶವಿದ್ದರೂ ಮಾಡದ, ಗೋಳಗುಮ್ಮಟವನ್ನು ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೆ ಇದುವರೆಗೂ ಶ್ರಮಿಸದ ಸಂಸದ ರಮೇಶ ಜಿಗಜಿಣಗಿ ಅವರು ಕೇವಲ ರೈಲ್ವೆ ಸೇತುವೆ ಮಾಡಿರುವುದನ್ನೇ ದೊಡ್ಡದಾಗಿ ಬಿಂಬಿಸುತ್ತಿರುವುದು ಅವರ ರಾಜಕೀಯ ಹಿರಿತನಕ್ಕೆ ತಕ್ಕುದಲ್ಲ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ವಾಗ್ದಾಳಿ ನಡೆಸಿದರು.