ಬೆಳಗಾವಿ ಅಭಿವೃದ್ಧಿಗಾಗಿ ಮಹಾನಗರ ಪಾಲಿಕೆ, ಬುಡಾ ಮತ್ತು ಸ್ಮಾರ್ಟ್ ಸಿಟಿ ಕಂಪನಿ ಪರಸ್ಪರ ಸಹಯೋಗದಲ್ಲಿ ಕೆಲಸವನ್ನು ಮಾಡಬೇಕೆಂದು ಶಾಸಕ ಅಭಯ್ ಪಾಟೀಲ್ ಸಲಹೆ ನೀಡಿದರು.

ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಸಭಾಗೃಹದಲ್ಲಿ ಶಾಸಕ ಅಭಯ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ, ಬುಡಾ ಮತ್ತು ಸ್ಮಾರ್ಟ್ ಸಿಟಿ ಕಂಪನಿಯ ಜಂಟಿ ಸಭೆಯನ್ನು ಕರೆಯಲಾಗಿತ್ತು. ವೇದಿಕೆಯ ಮೇಲೆ ಮಹಾಪೌರ ಮಂಗೇಶ್ ಪವಾರ್, ಉಪಮಹಾಪೌರರಾದ ವಾಣಿ ಜೋಷಿ, ಮಹಾನಗರ ಪಾಲಿಕೆ ಆಯುಕ್ತೆ ಶುಭಾ ಬಿ., ಬುಡಾ ಅಧ್ಯಕ್ಷ ಶಕೀಲ್ ಅಹ್ಮದ್, ಸ್ಮಾರ್ಟ್ ಸಿಟಿ ಎಂ.ಡಿ. ಸಯೀದಾ ಅಫ್ರೀನಾಬಾನು ಬಳ್ಳಾರಿ ಇನ್ನುಳಿದವರು ಉಪಸ್ಥಿತರಿದ್ಧರು.
ಈ ವೇಳೆ ಶಾಸಕ ಅಭಯ್ ಪಾಟೀಲ್ ಅವರು ಸ್ಮಾರ್ಟ್ ಸಿಟಿಯಾಗಲಿ ಮಹಾನಗರ ಪಾಲಿಕೆಯಾಗಲಿ ರಸ್ತೆ ನಿರ್ಮಾಣ ಮಾಡುವ ವೇಳೆ ಸಣ್ಣಪುಟ್ಟ ಕೆಲಸಗಳನ್ನು ಸಹಕಾರ್ಯದಿಂದ ಪೂರ್ಣಗೊಳಿಸಿ, ಮುಂದಿನ ಕೆಲಸಕ್ಕೆ ಅನುವು ಮಾಡಿ ಯಾಕೆ ಕೊಡುತ್ತಿಲ್ಲವೆಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಅದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಬೂಬು ಹೇಳುತ್ತಿದ್ದಂತೆ ಗರಂ ಆದ ಶಾಸಕರು, ಪರಸ್ಪರ ಸಹಯೋಗದೊಂದಿಗೆ ಕೆಲಸ ಮಾಡಬೇಕು. ಬೇರೆ ಬೇರೆ ರಾಷ್ಟ್ರಗಳಂತೆ ವರ್ತಿಸಬಾರದು ಎಂದರು.
ಇನ್ನು ನಗರದಲ್ಲಿ ಅಳವಡಿಸಲಾದ ಬೀದಿ ದೀಪಗಳ ದುರಸ್ಥಿ ಮತ್ತು ಬಲ್ಬುಗಳ ಬದಲಾವಣೆಯ ಕುರಿತು ಮಾಹಿತಿ ಪಡೆದ ಶಾಸಕರು, ಕೆಲವೆಡೆ ವಾಹನ ಸವಾರರು ಬೀದಿ ದೀಪಗಳಿಗೆ ಡಿಕ್ಕಿ ಹೊಡೆಸಿಕೊಂಡು ಹೋಗಿದ್ದು ಅವರ ವಿರುದ್ಧ ದೂರು ದಾಖಲಿಸಿ ಕ್ರಮಕೈಗೊಳ್ಳಲಾಗಿದೆಯೇ? ಎಂದು ಪ್ರಶ್ನಿಸಿದರು. ಆದರೇ, ಬೀದಿ ದೀಪಗಳ ನಿರ್ವಹಣೆಯ ಸರಿಯಾದ ಮಾಹಿತಿ ನೀಡಲು ತಡವರಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಅರ್ಧಂಬರ್ಧ ಕೆಲಸ ಸಂಪೂರ್ಣಗೊಳಿಸಲಾಗಲಿಲ್ಲವೆಂದರೇ ಅಮಾನತ್ತು ಮಾಡುವ ಎಚ್ಚರಿಕೆಯನ್ನು ನೀಡಿದರು.
ರಾಣಿ ಚೆನ್ನಮ್ಮ ನಗರ, ಶಹಾಪೂರ ಹರಿಜನವಾಡಾ, ಹೊಸೂರ ಆಚಾರ್ಯ ಗಲ್ಲಿ, ಬಿಚ್ಚು ಗಲ್ಲಿ, ಕಪಿಲೇಶ್ವರದಲ್ಲಿ ಕಂಬಗಳ ಅಳವಡಿಕೆಗೆ ವಿಳಂಬ ಏಕೆ ಆಗುತ್ತಿದೆ ಎಂದು ಶಾಸಕರು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಗುತ್ತಿಗೆದಾರ ಸ್ಪಂದನೆ ನೀಡುತ್ತಿಲ್ಲ. 9 ಬಾರಿ ನೋಟಿಸು ನೀಡಲಾಗಿದೆ ಎಂದರು. 83 ಲಕ್ಷ ರೂಪಾಯಿ ಹಣ ಬಾಕಿಯಿರುವುದಾಗಿ ತಿಳಿಸಿದರು. ಇದಕ್ಕೆ ಶಾಸಕರು ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಮಹಾನಗರ ಪಾಲಿಕೆ, ಬುಡಾ ಮತ್ತು ಸ್ಮಾರ್ಟ್ ಸಿಟಿ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ಧರು.