ನಗರದಲ್ಲಿ ಮತ್ತೆ ಪೊಲೀಸರ ಗನ್ ಸದ್ದು ಮಾಡಿದೆ. ಮನೆಯೊಂದರಲ್ಲಿ ದರೋಡೆ ಮಾಡಿದ್ದ ಇಬ್ಬರು ಅಂತರರಾಜ್ಯ ದರೋಡೆಕೋರರಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.

ಅಂತರರಾಜ್ಯ ಕಳ್ಳರಾದ ಇರ್ಷಾದ್ ಹಾಗೂ ಅಕ್ಬರ್ ಕಾಲಿಗೆ ಹುಬ್ಬಳ್ಳಿಯ ಉಪನಗರ ಪೊಲೀಸರು ಗುಂಡು ಹಾರಿಸಿದ್ದಾರೆ. ಸಭಾಪತಿ ಬಸವರಾಜ್ ಹೊರಟ್ಟಿಯವರ ಹುಬ್ಬಳ್ಳಿಯ ನಿವಾಸದ ಬಳಿ ಆರೋಪಿಗಳು ದರೋಡೆ ಮಾಡಿದ್ದರು. ಆರೋಪಿಗಳ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ.
ಕಾರ್ಯಾಚರಣೆ ವೇಳೆ, ಮೂವರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪೊಲೀಸ್ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ. ಪೊಲೀಸರಿಂದ ಗುಂಡೇಟು ತಿಂದ ಆರೋಪಿಗಳನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.