ಗುತ್ತಿಗೆದಾರ ಸಿಸಿ ರಸ್ತೆ ಕಾಮಗಾರಿಯ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಹಾಕದೇ ಅರ್ಧಕ್ಕೆ ನಿಂತಿದ್ದು, ಅದೇ ಕಾಂಕ್ರೀಟ್ ರಸ್ತೆಯಲ್ಲಿ ತೆರಳಲು ಹೋಗಿ ಬೈಕ್ ಸವಾರ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡದ ರಜತಗಿರಿಯಲ್ಲಿ ಸಂಭವಿಸಿದೆ. ಸಿಸಿ ರಸ್ತೆ ಕಾಮಗಾರಿಯ ಗುತ್ತಿಗೆದಾರನ ವಿರುದ್ಧ ಕುಟುಂಬಸ್ಥರು ಹಿಡಿಶಾಪ ಹಾಕಿದ್ದು, ಅಪಘಾತದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ಧಾರವಾಡ ನಗರದ ರಜತಗಿರಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆ ಕಾಮಗಾರಿ ಅರ್ಧಕ್ಕೆ ನಿಂತಿದೆ. ರಸ್ತೆ ಪೂರ್ಣಗೊಳ್ಳದೇ ಇರುವ ವಿಷಯ ತಿಳಿಯದೇ ಅದೇ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಬೈಕ್ ತೆಗೆದುಕೊಂಡು ಹೋಗುತ್ತಿದ್ದ ರವಿರಾಜ್ ಎಂಬ ಬೈಕ್ ಸವಾರ ರಸ್ತೆ ತುದಿವರೆಗೂ ಹೋಗಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಸಂಗೊಳ್ಳಿ ರಾಯಣ್ಣ ನಗರದ ನಿವಾಸಿಯಾಗಿರುವ ರವಿರಾಜ್ ತೀವ್ರವಾಗಿ ಗಾಯಗೊಂಡಿದ್ದಾರೆ.
ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದರೂ ಗುತ್ತಿಗೆದಾರ ಅಲ್ಲಿ ಬ್ಯಾರಿಕೇಡ್ ಹಾಕಿಸದೇ, ಯಾವುದೇ ಸೂಚನಾ ಫಲಕವನ್ನು ಅಳವಡಿಸದೇ ಹೋಗಿರುವುದು ಈ ದುರ್ಘಟನೆಗೆ ಕಾರಣವೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಬೈಕ್ ಸವಾರ ಬಿದ್ದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಧಾರವಾಡ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸಿದ್ದಾರೆ.