ಸಿಎಂ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಇಂದು 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಆಯವ್ಯಯ ಮಂಡಿಸಿದ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಆದರೆ, ಈ ಬಾರಿ ಮಂಡಿಸುತ್ತಿರುವ ಆಯವ್ಯಯ 4 ಲಕ್ಷ ಕೋಟಿ ರೂ ದಾಟಬಹುದು ಎಂದು ಅಂದಾಜಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆ ಮಾಡಿದ್ದಾರೆ. ಸದ್ಯ ಸಿಎಂ ಮಂಡಿನೋವಿನಿಂದ ಬಳಲುತ್ತಿದ್ದು, ಕುಳಿತುಕೊಂಡೇ ಬಜೆಟ್ ಭಾಷಣ ಮಾಡಿದರು. ಈ ಸಲದ ಬಜೆಟ್‌ನಲ್ಲಿ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ನಡುವೆ ಸಮತೋಲನ ಕಂಡುಕೊಳ್ಳಬೇಕಾಗಿರುವುದು ದೊಡ್ಡ ಸವಾಲಾಗಿದ್ದು, ಒಂದು ಕಡೆ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ ಸೇರಿ ಐದು ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡುವುದು. ಇನ್ನೊಂದೆಡೆ, ಮೂಲಸೌಕರ್ಯ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸಾಲ ಪಡೆಯುವ ಅನಿವಾರ್ಯ ಕಂಡುಬಂದಿದೆ. ಸಿಎಂ ಸಿದ್ದರಾಮಯ್ಯ ಅವರು ಗೃಹಜ್ಯೋತಿ ಯೋಜನೆಗೆ 10,100 ಕೋಟಿ ಮೀಸಲು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ಶಕ್ತಿ ಯೋಜನೆಗೆ ಪ್ರಸಕ್ತ ವರ್ಷ 5300 ಕೋಟಿ ಮೀಸಲು ನೀಡಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಪ್ರಾಜೆಕ್ಟ್ ಮೆಜೆಸ್ಟಿಕ್ ಯೋಜನೆಯಡಿ ಸಾರಿಗೆ ಹಬ್ ನಿರ್ಮಾಣ ಮಾಡಲಾಗಿದ್ದು, ಹೊನ್ನಾವರ, ಚಾಮರಾಜನಗರ, ಚಿತ್ರದುರ್ಗದಲ್ಲಿ ಪರೀಕ್ಷಾ ಪಥಕ್ಕೆ ಚಿಂತನೆ ನಡೆಸಲಾಗಿದೆ. ಸ್ವಯಂಚಾಲಿತ ಪರೀಕ್ಷಾ ಪಥ ನಿರ್ಮಾಣಕ್ಕೆ 12 ಕೋಟಿ ಅನುದಾನ ದೊರೆತಿದೆ. ಸಾರಿಗೆ ಕಚೇರಿಯಲ್ಲಿರುವ ದಾಖಲೆಗಳ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ.
ರಾಜ್ಯದ ಆರ್ಥಿಕತೆಗೆ ಬಹುಮುಖ್ಯ ಕೊಡುಗೆ ನೀಡುವ ಬೆಂಗಳೂರು ನಗರದ ಮೂಲಸೌಲಭ್ಯಗಳ ಅಭಿವೃದ್ಧಿಗೆ ಈ ಬಾರಿಯ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಪ್ರತಿವರ್ಷ ನೀಡಲಾಗುತ್ತಿದ್ದ 3000 ಕೋಟಿ ರೂ. ಅನುದಾನವನ್ನು ಈ ಬಾರಿ 7000 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 5,267 ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ತರ್ಕಬದ್ಧಗೊಳಿಸಿ 5000 ಹುದ್ದೆಗಳನ್ನ ಭರ್ತಿ ಮಾಡಲಾಗುವುದು ಎಂದು ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಇನ್ನು ರೈತರಿಗೆ ಬಂಪರ್ ಗಿಫ್ಟ್ ನೀಡಿರುವ ಸಿಎಂ ಡಿಸಿಸಿ (DCC), ಪಿಕಾರ್ಡ್ ಬ್ಯಾಂಕ್‌ಗಳಲ್ಲಿ (Picard Bank) ಸಾಲ ಮಾಡಿರುವ ರೈತರು ಈಗ ಬಡ್ಡಿ ಕಟ್ಟುವ ಹಾಗಿಲ್ಲ. ಈ ಎರಡು ಬ್ಯಾಂಕ್ಗಳಲ್ಲಿ ರೈತರ ಸಾಲದ ಬಡ್ಡಿ ಮನ್ನಾ ಮಾಡಲಾಗಿದೆ. 2 ಬ್ಯಾಂಕ್‌ಗಳಲ್ಲಿ ರೈತರ ಸಾಲದ ಬರೋಬ್ಬರಿ ₹240 ಕೋಟಿ ಬಡ್ಡಿ ಮನ್ನಾ ಮಾಡಲಾಗಿದೆ. ಜೊತೆಗೆ 37 ಲಕ್ಷ ರೈತರಿಗೆ ಸಾಲಕ್ಕಾಗಿ ₹28,000 ಕೋಟಿ ಘೋಷಿಸಲಾಗಿದೆ.
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯನ್ನು 6 ದಿನಕ್ಕೆ ವಿಸ್ತರಿಸಲಾಗುವುದು. ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು ನೀಡಲು 1,500 ಕೋಟಿ ರೂ. ಮೀಸಲಿಡಲಾಗಿದ್ದು, ಅಜೀಂ ಪ್ರೇಮ್ಜಿ ಸಹಯೋಗದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಇನ್ನು ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ 5 ಲಕ್ಷ ರೂಪಾಯಿ ನಗದು ರಹಿತ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ಘೋಷಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ಅರ್ಚಕರಿಗೆ ತಸ್ತೀಕ್ ಮೊತ್ತದ ಏರಿಕೆ ಮಾಡಲಾಗಿದೆ. 60 ಸಾವಿರ ರೂ.ನಿಂದ 72 ಸಾವಿರಕ್ಕೆ ತಸ್ತೀಕ್ ಮೊತ್ತ ಏರಿಸಲಾಗುವುದು. ಕರ್ನಾಟಕ ದೇವಾಲಯ ವಸತಿ ಕೋಶ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ದೇವಾಲಯಗಳ ಛತ್ರಗಳಲ್ಲಿ ರೂಮ್ ಬುಕಿಂಗ್ಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪ್ರವರ್ಗ 1, 2ಎ, 2ಬಿ (ಮುಸ್ಲಿಂ) ಸಮುದಾಯದವರಿಗೆ 2 ಕೋಟಿ ರೂ.ವರೆಗೆ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಾರೆ. ಕೈಗಾರಿಕ ಪ್ರದೇಶ ಭೂಮಿ ಹಂಚಿಕೆಯಲ್ಲೂ ಪ್ರವರ್ಗ ೧ ೨ಎ ಜತೆ ೨ಬಿ (ಮುಸ್ಲಿಂ) ಗೆ ಶೇಕಡಾ ೨೦ ರಷ್ಟು ಮೀಸಲಾತಿ ಘೋಷಿಸಿದ್ದಾರೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಮೂಲಸೌಕರ್ಯಕ್ಕೆ 50 ಕೋಟಿ ರೂ. ಮೀಸಲು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 30 ಮೆಟ್ರಿಕ್-ನಂತರದ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಕ್ರಮ.
ಅತ್ಯಂತ ಹಿಂದುಳಿದ 46 ಅಲೆಮಾರಿ ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗಾಗಿ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ ಒಂದರಂತೆ ಡಿ.ದೇವರಾಜ ಅರಸು ವಸತಿ ಶಾಲೆಗಳ ಪ್ರಾರಂಭ.
ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳಿಗೆ 62 ಹೊಸ ಮೆಟ್ರಿಕ್ ನಂತರದ ವಸತಿನಿಲಯಗಳನ್ನು ಪ್ರಾರಂಭಿಸಲು 15 ಕೋಟಿ ರೂ. ಮೀಸಲು.
ವಿದ್ಯಾರ್ಥಿನಿಲಯಗಳ ಕಟ್ಟಡಗಳ ರಿಪೇರಿ/ದುರಸ್ತಿ ಮಾಡಲು 25 ಕೋಟಿ ರೂ.
IAS, IPS, KAS, KSPS ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ನೀಡಲು ಬೆಂಗಳೂರಿನಲ್ಲಿ ಎರಡು ಸುಸಜ್ಜಿತ ವಸತಿ ನಿಲಯ ನಿರ್ಮಾಣ.
ಅಬಕಾರಿ ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣ ಮಾಡಲು ಸರ್ಕಾರ ಮುಂದಾಗಿದೆ. ಮದ್ಯದ ಬೆಲೆಯನ್ನು ಮತ್ತೆ ಏರಿಸುವ ಬಗ್ಗೆ ರಾಜ್ಯ ಸರ್ಕಾರ ಬಜೆಟ್ನಲ್ಲಿ ಸುಳಿವು ನೀಡಿದೆ. ಈ ಬಾರಿ 40 ಸಾವಿರ ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ರಾಜ್ಯದ ಮಲ್ಟಿಪ್ಲೆಕ್ಸ್ಗಳೂ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಪ್ರತಿ ಪ್ರದರ್ಶನದ ಪ್ರವೇಶ ದರವನ್ನು 200 ರೂಪಾಯಿಗೆ ಸೀಮಿತಗೊಳಿಸಲಾಗಿದೆ.
ಸಾಮಾಜಿಕ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುವ ಕನ್ನಡ ಚಲನಚಿತ್ರಗಳನ್ನು ಡಿಜಿಟಲ್ ಹಾಗೂ ನಾನ್ ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸಲು 3 ಕೋಟಿ ರೂ. ವೆಚ್ಚದಲ್ಲಿ ಚಲನಚಿತ್ರ ಭಂಡಾರವನ್ನು ಸ್ಥಾಪಿಸಲಾಗುವುದು.
ಪ್ರಸಕ್ತ ಸಾಲಿನಲ್ಲಿ 4,848 ಕೋಟಿ ರೂ. ವೆಚ್ಚದಲ್ಲಿ 1,850 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ ಹಾಗೂ 2,570 ಕಿ.ಮೀ ಉದ್ದದ ಜಿಲ್ಲಾ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.
400 ಕೋಟಿ ರೂ ವೆಚ್ಚದಲ್ಲಿ 250 ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳು ಮತ್ತು 100 ಉರ್ದು ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಉನ್ನತೀಕರಣ ಮತ್ತು ಅಲ್ಪಸಂಖ್ಯಾತ ಸಮುದಾಯದ ಸಾಮೂಹಿಕ ವಿವಾಹ ವೆಚ್ಚಕ್ಕೆ ಪ್ರತಿ ಜೋಡಿಗೆ ₹50 ಸಾವಿರ ನೀಡುವುದಾಗಿ ಘೋಷಿಸಲಾಗಿದೆ.
ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಮಹಾತ್ಮಾ ಗಾಂಧಿ ನಗರ ವಿಕಾಸ್ 2.0 ಯೋಜನೆಗೆ 2,000 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
348 ಕೋಟಿ ರೂ ವೆಚ್ಚದಲ್ಲಿ ತಲೆ ಎತ್ತಿರುವ ವಿಜಯಪುರ ವಿಮಾನ ನಿಲ್ದಾಣ 2025-26ನೇ ಸಾಲಿನಿಂದಲೇ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರೋಗ್ಯ ವಲಯಕ್ಕೆ ಭರ್ಜರಿ ಕೊಡುಗೆಗಳನ್ನು ನೀಡಿದ್ದು, ಆರೋಗ್ಯ ಕ್ಷೇತ್ರಕ್ಕೆ 17,473 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.
ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ, ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಮೈಸೂರಿನಲ್ಲಿ ಕುಸ್ತಿ, ವಾಲಿಬಾಲ್ ಮತ್ತು ಕೋಕೋ ತರಬೇತಿಗಾಗಿ ಅಕಾಡಮಿ ಸ್ಥಾಪನೆಗೆ 2 ಕೋಟಿ ರೂಪಾಯಿ ನೆರವು ನೀಡಲಾಗುವುದು. ನಿವೃತ್ತ ಕುಸ್ತಿಪಟುಗಳ ಮಾಸಾಸನ ಹೆಚ್ಚಿಸಲಾಗುವುದು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಕುಸ್ತಿಪಟುಗಳಿಗೆ 6 ಸಾವಿರ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದವರಿಗೆ 5 ಸಾವಿರ ಮತ್ತು ರಾಜ್ಯ ಮಟ್ಟದ ಕುಸ್ತಿಪಟುಗಳಿಗೆ 4500 ರೂಪಾಯಿ ಮಾಸಾಸನ ನೀಡಲಾಗುವುದು.
ಇನ್ನು ಹತ್ತು ಹಲವಾರು ಘೋಷಣೆಗಳನ್ನು ಬಜೆಟಿನಲ್ಲಿ ಮಾಡಲಾಗಿದೆ.