ಮಗ ಮಾಡಿದ ಯಡವಟ್ಟಿಗೆ ತಾಯಿಯನ್ನೇ ಭೀಕರವಾಗಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲಹಾಳ್ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲಹಾಳ್ ಗ್ರಾಮದಲ್ಲಿ ಶೇಖವ್ವ ಮಾದರ್(45) ಎಂಬಾಕೆಯನ್ನು ಕುಡಗೋಲಿನಿಂದ ಹೊಡೆದು ಇದೇ ಗ್ರಾಮದ ಮಂಜುನಾಥ ಮಾದರ ಎಂಬಾತ ಭೀಕರವಾಗಿ ಕೊಲೆ ಮಾಡಿದ್ದಾನೆ. ಶೇಖವ್ವ ಹಾಗೂ ಮಂಜುನಾಥ ಕುಟುಂಬಸ್ಥರ ಮಧ್ಯೆ ಹಲವು ವರ್ಷಗಳಿಂದ ಮನಸ್ತಾಪವಿತ್ತು. 2018 ರಲ್ಲಿ ಈ ಸಂಬಂಧ ಗಲಾಟೆ ವಿಕೋಪಕ್ಕೆ ತಿರುಗಿ ಶೇಖವ್ವ ಕುಟುಂಬ ಊರು ಬಿಟ್ಟಿದ್ದರು. ಕಲಹಾಳ್ದಿಂದ ಸವದತ್ತಿ ತಾಲೂಕಿನ ಕಗದಾಳ ಗ್ರಾಮದಲ್ಲಿ ನೆಲೆಸಿದ್ದರು. ಶೇಖವ್ವ ತಿಂಗಳಿಗೊಮ್ಮೆ ಕಲಹಾಳ್ ಮನೆಗೆ ಬಂದು ಸ್ವಚ್ಛ ಮಾಡಿ ಹೋಗಿದ್ದಳು. ಈ ಮಧ್ಯೆ ಬಾಗಲಕೋಟೆಯ ಯುವಕನ ಜೊತೆಗೆ ಮಂಜುನಾಥ ಸಹೋದರಿಯ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಆದರೇ ನಾನು ಮಂಜುನಾಥನ ತಂಗಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಯುವಕನ ಮೊಬೈಲ್ಗೆ ಶೇಖವ್ವ ಮಾದರ ಪುತ್ರ ಮೆಸೇಜ್ ಮಾಡಿದ್ದ. ಆದ್ದರಿಂದ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಇದರಿಂದ ಶೇಖವ್ವ ಕುಟುಂಬದ ಮೇಲೆ ಮಂಜುನಾಥ ಸಿಟ್ಟಾಗಿದ್ದ. ಪಡಿತರ ಒಯ್ಯಲು ನಿನ್ನೆ ಕರಹಾಳ್ಗೆ ಬಂದಿದ್ದ ಶೇಖವ್ವ ತಲೆಗೆ ಮಂಜುನಾಥ ಕೊಡಲಿಯಿಂದ ಬಲವಾಗಿ ಹೊಡೆದು ಶೇಖವ್ವ ಭೀಕರ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಮಂಜುನಾಥ ಮಾದರನನ್ನು ಸುರೇಬಾನ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.