ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮೈಕ್ರೋಫೈನಾನ್ಸ್ ಕಿರುಕುಳ ಮುಂದೊರೆದಿದೆ. ಒಂದೇ ತಿಂಗಳಲ್ಲಿ ಫೈನಾನ್ಸ್ ಕಿರುಕುಳಕ್ಕೆ ನಾಲ್ವರು ಬಲಿ ಆಗಿದ್ದಾರೆ. ವಾರದ ಕಂತು ಭರಿಸುವಂತೆ ನೀಡಿದ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸಿಎಂ ಆದೇಶ ಮಾಡಿದ್ರೂ ಫೈನಾನ್ಸ್ ಕಿರುಕುಳ ಬೆಳಗಾವಿ ಜಿಲ್ಲೆಯಲ್ಲಿ ಮುಂದೊರೆದಿದೆ.

ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಕಿರುಕುಳ ತಡೆಯಲು ಸಿಎಂ ಸಿದ್ದರಾಮಯ್ಯ ಸರ್ಕಾರ ಖಡಕ್ಕಾಗಿ ವಾರ್ನಿಂಗ್ ಮಾಡಿದೆ.ಸುಗ್ರೀವಾಜ್ಞೆ ಅಂತಹ ಕಠಿಣ ನಿರ್ಧಾರವನ್ನ ಸರ್ಕಾರ ಮಾಡಿದ್ರು.ಆದ್ರು ಸಿಎಂ ಆದೇಶಕ್ಕೆ ಡೋಂಟ್ ಕೇರ್ ವರ್ತನೆಯನ್ನ ಮೈಕ್ರೋಫೈನಾನ್ಸ್ ಗಳು ಮುಂದೊರೆಸಿವೆ. ಸಿಎಂ ಆದೇಶದ ಬಳಿಕವೂ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಬಸವರಾಜ್ ಹಟ್ಟಿ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಬೆಳಗಾವಿ ಜಿಲ್ಲೆಯಲ್ಲಿ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ 4 ನೇ ಬಲಿಯಾಗಿದೆ. ಬಸವರಾಜ್ ವಿವಿಧ ಮೈಕ್ರೋಫೈನಾನ್ಸ್ ಗಳಿಂದ 2 ಲಕ್ಷ 50 ಸಾವಿರ ರುಪಾಯಿ ಸಾಲ ಮಾಡಿದ್ದನು. ಆದ್ರೆ ಆರ್ಥಿಕ ಸಮಸ್ಯೆಯಿಂದ ತುಂಬಲು ವಿಳಂಬವಾಗಿದೆ. ಆದ್ರೆ ನಾಲ್ಕು ಮೈಕ್ರೋಫೈನಾನ್ಸ್ ಸಿಬ್ಬಂದಿ ವಾರದ ಕಂತು ಭರಿಸುವಂತೆ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಫೆಬ್ರವರಿ 11 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ತಕ್ಷಣವೇ ಚಿಕಿತ್ಸೆ ಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಬಸವರಾಜ್ ಮೃತಪಟ್ಟಿದ್ದಾನೆ. ಬಸವರಾಜ್ ಸಾವಿಗೆ ಮೈಕ್ರೋಫೈನಾನ್ಸ್ ಕಿರುಕುಳ ಕಾರಣವೆಂದು ಪತ್ನಿ ಆರೋಪಿಸಿದ್ದಾಳೆ.
ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಇದು ನಾಲ್ಕನೇ ಬಲಿಯಾಗಿದೆ. ಈ ಹಿಂದೆ ಸಚಿವ ಸತೀಶ್ ಜಾರಕಿಹೊಳಿ ಮತಕ್ಷೇತ್ರದಲ್ಲಿ ಸರೋಜಾ, ಬೈಲಹೊಂಗಲದಲ್ಲಿ ರಫೀಕ್ ತಿಗಡಿ, ರಾಯಬಾಗ ತಾಲೂಕಿನಲ್ಲಿ ರೈತ ಶಿವನಪ್ಪ ಧರ್ಮಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮತ್ತೆ ರಾಯಬಾಗ ಪಟ್ಟಣದಲ್ಲಿ ಬಸವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಕ್ರೋಫೈನಾನ್ಸ್ ಸಿಬ್ಬಂದಿ ವರ್ಷಾಂತ್ಯ ಅನ್ನೋ ಕಾರಣಕ್ಕೆ ಸಾಲ ವಸೂಲಿ ಹೆಸರಿನಲ್ಲಿ ಗೂಂಡಾವರ್ತನೆ ಪ್ರದರ್ಶನ ಮಾಡ್ತಿದ್ದಾರೆ. ಇದರಿಂದ ಸಾಲ ಭರಿಸಲಾಗದೇ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ, ಪೊಲೀಸರ ಇಲಾಖೆ ಎಷ್ಟೇ ವಾರ್ನಿಂಗ್ ಮಾಡಿದ್ರು ಫೈನಾನ್ಸ್ ಕಿರುಕುಳ ಮಾತ್ರ ಬೆಳಗಾವಿ ಜಿಲ್ಲೆಯಲ್ಲಿ ನಿಲ್ಲುತ್ತಿಲ್ಲ. ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ಕೊಟ್ಟರು ಮೈಕ್ರೋಫೈನಾನ್ಸ್ ಸಿಬ್ಬಂದಿಗಳಿಗೆ ಭಯವಿಲ್ಲದಂತಾಗಿದೆ. ಅದರ ಪರಿಣಾಮವಾಗಿಯೇ ಬೆಳಗಾವಿ ಜಿಲ್ಲೆಯೊಂದರಲ್ಲೇ ದಿನವು ಒಂದಿಲ್ಲೊಂದು ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಒಟ್ಟಿನಲ್ಲಿ ಸರ್ಕಾರದ ಖಡಕ್ ಎಚ್ಚರಿಕೆ ಮಧ್ಯೆಯೂ ಮೈಕ್ರೋಫೈನಾನ್ಸ್ ಗಳ ಆಟಾಟೋಪಕ್ಕೆ ಆತ್ಮಹತ್ಯೆ ಸರಣಿ ಮುಂದೊರೆದಿದೆ. ಇನ್ನಾದ್ರು ಸರ್ಕಾರ ಕಿರುಕುಳ ಕೊಟ್ಟ ಫೈನಾನ್ಸ್ ಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ.