ಮೂಲಭೂತ ಪ್ರಶ್ನೆಗಳಿಗೆ ಬಿಜೆಪಿ ಬಳಿ ಉತ್ತರವೇ ಇಲ್ಲ. ಬಿಜೆಪಿಯವರು ಕೇವಲ ಕಾಂಗ್ರೆಸ್, ರಾಹುಲ್ ಗಾಂಧಿ ಅವರನ್ನು ಟೀಕಿಸುವ ಕೆಲಸ ಮಾಡುತ್ತಾರೆ. ಹತ್ತು ವರ್ಷಗಳಿಂದ ದೇಶದ ಮೂಲಭೂತ ಸಮಸ್ಯೆಗಳ ಬಗ್ಗೆ ಬಿಜೆಪಿಯವರ ಬಳಿ ಉತ್ತರವೇ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ 10 ವರ್ಷದ ಸಾಧನೆ ಕೇಳಿದರೆ 70 ವರ್ಷದ ಕಥೆಗೆ ಹೋಗುತ್ತಾರೆ. ತಾವು ಹಿಂದೂ ಪರ ಎನ್ನುತ್ತಾರೆ. ಆದರೆ, ದೇಶದ ಹಿಂದೂಗಳೆಲ್ಲ ಬಡತನದಲ್ಲೇ ಇದ್ದಾರೆ. ಯಾವ ಹಿಂದೂಗೂ ಮೋದಿ ಅವರು ಕುದುರೆ ಕೊಟ್ಟಿಲ್ಲ. ಮೋದಿ ಕೊಟ್ಟ ಕುದರೆಯನ್ನು ಯಾವ ಹಿಂದೂ ಕೂಡ ಓಡಿಸುತ್ತಿಲ್ಲ. ಯಾವ ಹಿಂದೂ ಕೂಡ ತನ್ನ ಮನೆಯಲ್ಲಿ ಬಂಗಾರದ ತಟ್ಟೆಯಲ್ಲಿ ಊಟ ಮಾಡುತ್ತಿಲ್ಲ. ಬಿಜೆಪಿ ಬಂದ ಮೇಲೆ ಹಿಂದೂಗಳು ಮಧ್ಯಮ ವರ್ಗದಿಂದ ಬಡತನಕ್ಕೆ ಹೋಗಿದ್ದಾರೆ. ಹಿಂದೂ ಕಾರ್ಡ್ ಜನರ ತಲೆಗೆ ತಿಕ್ಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಂದೂ ಕಾರ್ಡ್ ಮೂಲಕ ಮತ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಎಷ್ಟು ಹಿಂದೂ ಮಕ್ಕಳಿಗೆ ಇವರು ಕೆಲಸ ಕೊಟ್ಟಿದ್ದಾರೆ ಹೇಳಲಿ. ಎಷ್ಟು ಹಿಂದೂಗಳಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ? ದಿನ ಬೆಳಗಾದರೆ ಹಿಂದೂ ಎಂಬ ಆಟ ಆಡುತ್ತಿದ್ದಾರೆ. ಹಿಂದೂ ಮತ್ತು ದೇವರೆಂಬ ಕಾರ್ಡ್ ಹಿಡಿದು ಆಟ ಆಡುತ್ತಿದ್ದಾರೆ.
ದೇಶದ ವ್ಯವಸ್ಥೆಗೆ ಯಾರೋ ಒಬ್ಬರು ಅನಿವಾರ್ಯ ಅಲ್ಲ. ಈ ವ್ಯವಸ್ಥೆ ನಡೆಯುತ್ತಿದೆ. ಇವರೇ ದೊಡ್ಡವರು ಇವರಿಂದಲೇ ದೇಶ ನಡೆಯುತ್ತಿದೆ ಎನ್ನುವಂತೆ ಮಾಡುತ್ತಿದ್ದಾರೆ. ಇವರೇ ಜೇಮ್ಸ್ ಬಾಂಡ್ ಇವರೇ ಬಂದು ಎಲ್ಲ ಕಾಪಾಡುತ್ತಿದ್ದಾರೆ ಎನ್ನುವಂತೆ ಮಾಡುತ್ತಿದ್ದಾರೆ ಎಂದರು. ಜತೆಗೆ ಟೆಲಿಪ್ರಾಂಪ್ಟರ್ ಇಲ್ಲದೇ ಮೋದಿಗೆ ಭಾಷಣ ಮಾಡಲು ಬರುವುದಿಲ್ಲ. ಮೋದಿ ಒಮ್ಮೆಯಾದರೂ ಸುದ್ದಿಗೋಷ್ಠಿ ಮಾಡಲಿ. ಮಾಧ್ಯಮದವರು ಕೂಡ ಮೋದಿ ಸುದ್ದಿಗೋಷ್ಠಿ ನಡೆಸುವಂತೆ ಆಗ್ರಹ ಮಾಡಬೇಕು. ಮನಮೋಹನ್ ಸಿಂಗ್ 120ಕ್ಕೂ ಹೆಚ್ಚು ಸುದ್ದಿಗೋಷ್ಠಿ ನಡೆಸಿದ್ದರು. ವಿದೇಶಕ್ಕೆ ಹೋಗುವಾಗ, ವಾಪಸ್ ಬರುವಾಗ ಪತ್ರಿಕಾಗೋಷ್ಠಿ ಮಾಡಬೇಕು. ಆದರೆ, ಮೋದಿ ಯಾವಾಗ ಹೋಗುತ್ತಾರೆ ಯಾವಾಗ ಬರುತ್ತಾರೆ ಗೊತ್ತೇ ಆಗೋದಿಲ್ಲ. ಅವರದ್ದೇ ಕ್ಯಾಮೆರಾ ಅವರದ್ದೇ ಎಡಿಟಿಂಗ್ ಅದನ್ನೇ ಮಾಧ್ಯಮಗಳಿಗೆ ತೋರಿಸಬೇಕಾದ ಸ್ಥಿತಿ ಇದೆ. ಇನ್ನೂ ಕೃಷಿ ವಿವಿ ಜಾಗದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಲಾಡ್, ಕೃಷಿ ವಿವಿ ಕುಲಪತಿ ಬಹಳ ಸ್ಮಾರ್ಟ್ ಇದ್ದಾರೆ.
ಅವರ ಬಗ್ಗೆ ನನಗೇನೂ ಮುಲಾಜಿಲ್ಲ. ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಗೆ ಕಾಳಜಿ ಇದ್ದಿದ್ದರೆ ಮೊದಲೇ ಜಿಲ್ಲಾಡಳಿತಕ್ಕೆ ಹೇಳಬೇಕಿತ್ತು. ಈಗ ಜಿಲ್ಲಾಡಳಿತಕ್ಕೆ ಬೇರೆ ರೀತಿಯಲ್ಲೇ ಪತ್ರ ಬರೆದಿದ್ದಾರೆ. ನನಗೂ ಕುಲಪತಿಗಳು ಸರಿಯಾಗಿ ಭೇಟಿಯಾಗುವುದಿಲ್ಲ. ಹಾಗಂತ ನಂದೇನೂ ದೂರು ಇಲ್ಲ. ನಾವೆಲ್ಲ ಒಂದು ವ್ಯವಸ್ಥೆಯಲ್ಲಿ ಸೇರಿ ಕೆಲಸ ಮಾಡಬೇಕು. ಆದರೆ, ಕೆಲವರು ಇಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಇಲ್ಲಿ ಯಾರೂ ದೊಡ್ಡವರು ಸಣ್ಣವರಲ್ಲ. ಅವರ ಕೆಲಸ ಅವರು ಮಾಡಬೇಕು. ಅವರು ಪ್ರತ್ಯೇಕವಾಗಿ ಕೆಲಸ ಮಾಡುವ ಮನಸ್ಥಿತಿಯಲ್ಲಿದ್ದಾರೆ. ಅವರ ತಲೆ ಮೇಲೆ ಗರಿ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಕೃಷಿ ವಿವಿ ಕುಲಪತಿ ಮೇಲೆ ಸಚಿವ ಲಾಡ್ ಸಿಡಿಮಿಡಿಗೊಂಡರು.