Belagavi

ಬೆಳಗಾವಿಯಲ್ಲಿ ಸಿ.ಟಿ. ರವಿ ವಿರುದ್ಧ ಸಿಡಿದೆದ್ದ ಸ್ತ್ರೀಶಕ್ತಿ…

Share

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರನ್ನು ಆಕ್ಷೇಪಾರ್ಹ ಪದದಿಂದ ನಿಂದಿಸಿದ್ದಾರೆಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ಇಂದು ಬೆಳಗಾವಿಯಲ್ಲಿ ವಿವಿಧ ಸಂಘಗಳು ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬೆಳಗಾವಿ ನಗರದ ಕ್ಲಬ್ ರೋಡ್, ಬಿ. ಶಂಕರಾನಂದ ಮಾರ್ಗದಿಂದ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ವರೆಗೆ ವಿವಿಧ ಸಂಘಗಳು ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿಗಳಿಂದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಯಿತು. ಈ ವೇಳೆ ಪ್ರತಿಭಟನಾಕಾರ ಮಹಿಳೆಯರು ಹೆಗಲ ಮೇಲೆ ಸಿ.ಟಿ. ರವಿ ಅಣುಕು ಶವವನ್ನು ಹೊತ್ತು ಅಣುಕು ಶವಯಾತ್ರೆ ನಡೆಸಿದರು. ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಿ.ಟಿ. ರವಿ ಭಾವಚಿತ್ರಗಳನ್ನು ದಹಿಸಿ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.

ಸಿ.ಟಿ. ರವಿ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ತಕ್ಷಣ ವಜಾಗೊಳಿಸಬೇಕು. ಹಿರಿಯ ಚಾವಡಿ ಎನಿಸಿಕೊಳ್ಳುವ ವಿಧಾನ ಪರಿಷತ್ತಿನಲ್ಲಿ ಇಂತಹ ಸದಸ್ಯರು ಇರಬಾರದು. ಸಿ.ಟಿ. ರವಿ ಅವರನ್ನು ವಜಾಗೊಳಿಸುವವರೆಗೂ ರಾಜ್ಯಾದ್ಯಂತ ನಮ್ಮ ಪ್ರತಿಭಟನೆ ನಡೆಯಲಿದೆ ಎಂದು ಅಡಿವೇಶ ಇಟಗಿ ಹೇಳಿದರು.

ಸಿ.ಟಿ ರವಿ ಅವರು ಸದನದಲ್ಲಿ ಸಚಿವೆ ಹೆಬ್ಬಾಳ್ಕರ ವಿರುದ್ಧ ಸ್ತ್ರೀಕುಲ ಸಹಿಸದ ಪದವನ್ನು ಬಳಸಿದ್ದಾರೆ. ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮನ ನಾಡಿನಲ್ಲಿ ರಾಜ್ಯದ ಮನೆಮಗಳಾಗಿ ವಿಧಾನಸಭೆಯನ್ನು ಪ್ರತಿನಿಧಿಸುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ವಿರುದ್ಧ ಅಪಶಬ್ಬದ ಬಳಸಿದ್ದಾರೆ. ಸಿ.ಟಿ. ರವಿ ಅವರನ್ನು ಕೂಡಲೇ ಎಂಎಲಸಿ ಸ್ಥಾನದಿಂದ ವಜಾಗೊಳಿಸಬೇಕೆಂದು ಶಂಕರಗೌಡ ಪಾಟೀಲ ಒತ್ತಾಯಿಸಿದರು.

ಜನಪ್ರತಿನಿಧಗಳಾದವರು ತಮ್ಮ ಘನತೆಯನ್ನು ಕಾಯ್ದುಕೊಂಡು ಹೋಗಬೇಕು. ಸಿ.ಟಿ. ರವಿ ಅವರು ತಮ್ಮ ಮನೆಯಲ್ಲಿಯೂ ಹೆಣ್ಣು ಮಕ್ಕಳಿದ್ದಾರೆಂಬುದನ್ನು ಮರೆತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಂದಿಸಿದ್ದಾರೆ. ಸಚಿವೆ ಹೆಬ್ಬಾಳ್ಕರ್ ರಾಜ್ಯದ ಮನೆ ಮಗಳಾಗಿ ಸೇವೆ ಸಲ್ಲಿಸುವಾಗಿ ಅವರನ್ನು ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ್ದಾರೆ. ತಕ್ಷಣ ಸಿ.ಟಿ ರವಿ ತಮ್ಮ ಎಂ.ಎಲ್.ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಘನತೆಯನ್ನು ಕಾಯ್ದುಕೊಳ್ಳಬೇಕೆಂದು ಬಸವರಾಜ್ ಮ್ಯಾಗೋಟಿ ಆಗ್ರಹಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ಬೇಟಿ ಬಚಾವೋ…ಬೇಟಿ ಪಠಾವೋ ಎಂದು ಸಂದೇಶ ನೀಡುವ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ. ಬಿಜೆಪಿ ಎಂಎಲಸಿ ಸಿ.ಟಿ. ರವಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೇ ರಾಜ್ಯಾದ್ಯಂತ ಮಹಿಳೆಯರಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರಾದ ರೋಹಿಣಿ ಬಾಬಸೇಠ ಎಚ್ಚರಿಸಿದರು.

ಇನ್ನೋರ್ವ ಪ್ರತಿಭಟನಾಕಾರರು ಪರಿಷತ್ ಸದಸ್ಯ ಸಿ.ಟಿ. ರವಿ ತಮ್ಮ ತಾಯಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕೆಟ್ಟದಾದ ಪದ ಬಳಸಿ ನಿಂದಿಸಿದ್ದಾರೆ. ಇದರಿಂದ ಕರ್ನಾಟಕದ ಸಂಪೂರ್ಣ ಮಹಿಳಾವರ್ಗಕ್ಕೆ ಅಪಮಾನವಾಗಿದೆ. ಕಾಂಗ್ರೆಸ್ಸಿನ ಒಳ್ಳೆಯ ಸಚಿವೆಯ ಕಾರ್ಯವನ್ನು ನೋಡಲಾಗದೇ ಹೊಟ್ಟೆ ಕಿಚ್ಚಿನಿಂದ ಬಿಜೆಪಿ ಸದಸ್ಯ ಈ ರೀತಿ ವರ್ತಿಸಿದ್ದಾರೆ. ಅವರಿಗೆ ತಾವೂ ತಕ್ಕ ಪಾಠ ಕಲಿಸುತ್ತೇವೆ ಎಂದರು.

ಮತ್ತೋರ್ವ ಪ್ರತಿಭಟನಾಕಾರರು ಇಂದು ಮಹಿಳೆಯರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ನೋಡಿ ರಾಜಕಾರಣಕ್ಕೆ ಬರುತ್ತಿದ್ದೇವೆ. ಅಂತಹದ್ದರಲ್ಲಿ ಲಕ್ಷ್ಮೀ ಅಕ್ಕ ಅವರನ್ನು ಸಿ.ಟಿ. ರವಿ ನಿಂದಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದಾರೆ. ಬೇಟಿ ಬಚಾವೋ ಬೇಟಿ ಪಠಾವೋ ಎನ್ನುವ ಪಿಎಂ ಮೋದಿ, ಶಾಹ್ ಅವರಿಗೆ ಸ್ತ್ರೀಯರ ನಿಂದನೆ ಕಾಣುತ್ತಿಲ್ಲವೇ? ಇದು ಕೇವಲ ಲಕ್ಷ್ಮೀ ಹೆಬ್ಬಾಳ್ಕರ್ ಅಪಮಾನವಲ್ಲ. ಕರ್ನಾಟಕದ ಸಂಪೂರ್ಣ ಮಹಿಳೆಯರ ಅಪಮಾನ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.  ನಂತರ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗಿಯಾಗಿದ್ಧರು.

Tags:

error: Content is protected !!