ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿಗಾಗಿ ಸುವರ್ಣಸೌಧದ ಮುಂದೆ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಸಮುದಾಯದ ಸದಸ್ಯರ ಮೇಲೆ ನಿನ್ನೆ ನಡೆದ ಲಾಠಿಚಾರ್ಜ್ ಅಮಾನುಷವಾದದ್ದು, ಅತ್ಯಂತ ಖಂಡನೀಯವಾದದ್ದು ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ಈ ಸರ್ವಾಧಿಕಾರಿ ಧೋರಣೆಗೆ ಧಿಕ್ಕಾರ. ಧರಣಿಯನ್ನು ಹತ್ತಿಕ್ಕುವ ಭರದಲ್ಲಿ ಪೊಲೀಸರಿಂದ ಧರಣಿ ನಿರತರ ಮೇಲೆ ಹಲ್ಲೆ ನಡೆಸಿ, ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ ನಿಮ್ಮ ನಡೆಯನ್ನು ನಾವು ಖಂಡಿಸುತ್ತೇವೆ.
ಪಂಚಮಸಾಲಿ ಲಿಂಗಾಯತ 2ಎ ಮೀಸಲಾತಿ ಹಾಗೂ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ OBC ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲು ಒತ್ತಾಯಿಸಿ ಸಮುದಾಯದ ಸದಸ್ಯರು ಶಾಂತಿಯುತವಾಗಿ ನಡೆಸಿದ ಹೋರಾಟವನ್ನು ತಡೆಯುವುದಕ್ಕಾಗಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಧರಣಿ ನಿರತರನ್ನು ಚದುರಿಸಲು ಲಾಠಿ ಬೀಸುವಂತೆ ಮಾಡಿ, ಸಮಾಜದ ಮುಖಂಡರನ್ನು ವಶಕ್ಕೆ ಪಡೆದು, ಭಯದ ವಾತಾವರಣ ಸೃಷ್ಟಿ ಮಾಡಿ, ಹೊರಾಟವನ್ನು ತಡೆಯಲು ಪ್ರಯತ್ನಿಸಿದ ನಿಮ್ಮ ನಡೆ ಅಕ್ಷರಶಃ ಆಘಾತಕಾರಿ.
ಪಂಚಮಸಾಲಿ ಲಿಂಗಾಯತ ಸಮುದಾಯದವರ ಬೆಂಬಲಕ್ಕೆ ನಾನು ಸದಾ ಸಿದ್ಧ. ಸಮುದಾಯದ ಸದಸ್ಯರು ಭಯಪಡುವ ಅಗತ್ಯವಿಲ್ಲ ಎಂದರು.