ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡ ತಾಲೂಕಿನಾದ್ಯಂತ ರೈತ ಕುಟುಂಬದ 1660 ಎಕರೆ ರೈತರ ಜಮೀನು ವಕ್ಪ್ ಆಸ್ತಿ ಎಂದು ಕಬಳಿಕೆಯಾಗಿದೆ, ಸರಕಾರದ ಹುಡುಗಾಟಕ್ಕೆ ರೈತರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಜನಪ್ರತಿನಿಧಿಗಳು ಮೌನವಾಗಿರುವುದು ವಿಷಾಧನೀಯ, ಸಂತ್ರಸ್ತ ರೈತರ ಪರವಾಗಿ ಅವರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿರಂತರ ಎಂದು ನ್ಯಾಯವಾದಿ ಸಂಪತಕುಮಾರ ಶೆಟ್ಟಿ ಅವರು ಹೇಳಿದರು.
ಅವರು ಪಟ್ಟಣದಲ್ಲಿ ರೈತ ಸಂಘ, ಮಾಜಿ ಸೈನಿಕರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಪ್ರತಿಭಟನೆ ಮಾತನಾಡಿ ತಹಶಿಲ್ದಾರ ಕಛೇರಿಯವರಿಂದ ಪಡೆದ ಮಾಹಿತಿಯಲ್ಲಿ ಅಥಣಿ ತಾಲೂಕಿನಲ್ಲಿ ಎರಡು ಬಾರಿ ಗೆಜೆಟ್ ಆಗಿ ಸುಮಾರು 1660 ಎಕರೆ ಜಮೀನು ವಕ್ಪ್ ಎಂದು ನಮೂದು ಆಗಿದೆ. 1985 ರಲ್ಲಿ ಮೊದಲ ಬಾರಿ ಗೆಜೆಟ್ ಆಗಿ 1560 ಎಕರೆ ಜಮೀನು ಹಾಗೂ 2019 ರಲ್ಲಿ ಎರಡನೇ ಬಾರಿ ಗೆಜೆಟ್ ಆಗಿ 107 ಎಕರೆ ವಕ್ಪ್ ಜಮೀನು ಎಂದು ಘೊಷಣೆಯಾಗಿದೆ, ಒಂದು ನೋಟಿಫೀಕೆಶನ್ ಹೊರಡಿಸಿ ರೈತರ ಆಸ್ತಿಯನ್ನು ತಮ್ಮದಾಗಿಸಿಕೊಳ್ಳುತ್ತಿರುವವರು ಅಗತ್ಯ ದಾಖಲಾತಿಯನ್ನು ನಮಗೆ ಒದಗಿಸಿಬೇಕು ಇಲ್ಲವಾದರೆ ಅವರ ವಿರುದ್ದ ಕಾನೂನು ಹೋರಾಟ ಮಾಡಲಾಗುವುದು, ಸಧ್ಯದ ಸರಕಾರ ಕೇವಲ 2023 ರ ನೋಟಿಫಿಕೇಶನ್ ಗೆ ಸೀಮಿತವಾಗಿದೆ, ಈ ಮುಂಚೆ ಮಾಡಿದ ಎಲ್ಲ ನೋಟಿಫಿಕೇಶನ್ ಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಅನಂತರ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಮುಖ ಹರೀಶಾಚಾರ್ಯ ಶಿರೂರ, ರೈತ ಸಂಘದ ಮುಖಂಡ ಶಿವಾನಂದ ಖೋತ, ನ್ಯಾಯವಾದಿ ಮಿಥೇಶ ಪಟ್ಟಣ ಅವರು ಮಾತನಾಡಿದರು. ಈ ಹೋರಾಟದಲ್ಲಿ ಮಾಜಿ ಸೈನಿಕರ ಸಂಘದ ಸಿದ್ದರಾಜ ಬೋರಾಡೆ, ಅಥಣಿ ಜಿಲ್ಲಾ ಹೋರಾಟ ಸಮೀತಿಯ ಅಧ್ಯಕ್ಷ ಪ್ರಶಾಂತ ತೋಡಕರ, ನ್ಯಾಯವಾದಿ ವಿನಯಗೌಡ ಪಾಟೀಲ, ಇಮಗೌಡರ ಚಮಗೌಡ, ಡಾ ರವಿ ಸಂಕ ಸೇರಿದಂತೆ ಅನೇಕರಿದ್ದರು.