ಖಾನಾಪೂರ ತಾಲೂಕಿನ ಬೇಕವಾಡ, ಸಾಗರೆ, ದೊಡ್ಡೆಬೈಲ್, ಕೂನಕಿಕೊಪ್ಪ ಭಾಗಗಳಲ್ಲಿ ಗಜರಾಜ ಲಗ್ಗೆ ಇಟ್ಟಿದ್ದು, ಕಳೆದ ನಾಲ್ಕೈದು ದಿನಗಳಿಂದ ಈ ಪ್ರದೇಶದಲ್ಲಿ ಬಿಡು ಬಿಟ್ಟಿರುವ ಗಜರಾಜ ರೈತರ ಕೈಗೆ ಬಂದ ಬೆಳೆಗಳು ಹಾಳು ಮಾಡುತ್ತಿದ್ದಾನೆ. ಪ್ರತಿ ವರ್ಷ ಸುಗ್ಗಿಯ ದಿನಗಳಲ್ಲಿ ಆನೆಗಳ ಆಗಮನವಾಗುತ್ತದೆ. ಈ ಹಿಂದೆ ಬೇಕವಾಡ ಗ್ರಾಮಕ್ಕೆ ಮಾರ್ಚ್ ತಿಂಗಳಲ್ಲಿ ಆಗಮಿಸಿದ್ದ ಉದಾಹರಣೆ ಕೂಡಾ ಇದೆ. ನಂದಗಡದಲ್ಲಿಯೂ ಗಜರಾಜ ಅಟ್ಟಹಾಸ ಮೆರೆದಿದ್ದ. ಇದೀಗ ಮತ್ತೆ ಆನೆ ಆಗಮಿಸಿದ ಹಿನ್ನೆಲೆ ಸಾಗರೆ, ನಂಜಿನಕೂಡಲ, ದೊಡ್ಡೆಬೈಲ್ ಪ್ರದೇಶದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ. ಸಾಗರೆಯಲ್ಲಿ ಮದಗಜನ ಅಟ್ಟಹಾಸಕ್ಕೆ ಸಾಕು ನಾಯಿ ಬಲಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಗಳ ಶಾಶ್ವತ ಬಂದೋಬಸ್ತ್ ಮಾಡಬೇಕು ಮತ್ತು ಯೋಗ್ಯ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗುತ್ತಿದೆ.