ಗುಮ್ಮಟನಗರಿಯಲ್ಲಿ ನವರಾತ್ರಿ ಹಬ್ಬ ಸಂಭ್ರಮ ಮನೆ ಮಾಡಿದೆ. ನವರಾತ್ರಿ ಎಂದರೆ ದಾಂಡಿಯಾದ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಇರೋದು ವಾಡಿಕೆ. ಅದರಂತೆ ವಿಜಯಪುರ ನಗರದ ಭಾವಸಾರ ನಗರದ ಆಝಾದ ಆದಿಶಕ್ತಿ ಮಿತ್ರ ಮಂಡಳಿಯಲ್ಲಿ ಪ್ರತಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಯುವ ಧುರೀಣ ಮಹೇಶ ಒಡೆಯರ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಮಂಡಳಿಯಲ್ಲಿ ನಡೆಯುವ ದಾಂಡಿಯಾವು ಬಹಳ ಫೇಮಸ್ ಆಗಿದೆ. ಪ್ರತಿದಿನ ತಡರಾತ್ರಿ ಯವರೆಗೂ ಇಲ್ಲಿ ಮಹಿಳೆಯರು, ಚಿಣ್ಣರು ಹಾಗೂ ಯುವಕರು ದಾಂಡಿಯಾದಲ್ಲಿ ತೊಡಗುತ್ತವೆ.
ಪ್ರತಿದಿನ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇನ್ನೂ ಉದ್ಯಮಿ ರತನ್ ಟಾಟಾರಿಗೆ ದಾಂಡಿಯಾ ಕಾರ್ಯಕ್ರಮಕ್ಕೂ ಮೊದಲು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದಾಂಡಿಯಾಗಾಗಿ ಆಗಮಿಸಿದ್ದವರೆಲ್ಲರೂ ರತನ್ ಟಾಟಾ ರಿಗೆ ಭಾವಪೂರ್ಣ ವಿದಾಯ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಧುರೀಣ ಮಹೇಶ ಒಡೆಯರ್ ದೇಶದ ಕೈಗಾರಿಕಾ ಉದ್ಯಮಕ್ಕೆ ಹೊಸ ಹೆಸರು ತಂದಿದ್ದ ಮೇರು ಚೇತನ, ಟಾಟಾ ಸಮೂಹ ಸಂಸ್ಥೆಗಳ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರ ದೂರದೃಷ್ಟಿ, ಸರಳತೆ, ವಿನಮ್ರತೆ ಸದಾ ನಮ್ಮೆಲ್ಲರ ಮನದಲ್ಲಿ ಹಸಿರಾಗಿರುತ್ತದೆ.
ಅವರು ಸ್ಥಾಪಿಸಿದ ಅಸಂಖ್ಯಾತ ಉದ್ಯಮಗಳು ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ರತನ್ ಟಾಟಾ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಅವರ ಬಂಧುಗಳಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು. ಈ ವೇಳೆ ನೆರೆದಿದ್ದವರೆಲ್ಲರೂ ಒಂದು ನಿಮಿಷ ಮೌನ ಆಚರಿಸಿ ಮಹಾನಗರ ಉದ್ಯಮಿಗೆ ವಿದಾಯ ಹೇಳಿದರು.