ಹದಗೆಟ್ಟು ಹೋದ ಬೆಳಗಾವಿ-ವೆಂಗುರ್ಲಾ ಸಂಪರ್ಕ ರಸ್ತೆಯನ್ನು 7 ದಿನದೊಳಗೆ ಅಭಿವೃದ್ಧಿಪಡಿಸಬೇಕು. ಮತ್ತು ಭವಿಷ್ಯದಲ್ಲಿ ಚತುಷ್ಪಥ ರಸ್ತೆ ನಿರ್ಮಿಸದಿದ್ದರೇ ಉಗ್ರ ಪ್ರತಿಭಟನೆ ನಡೆಸುವುದಾಗಿ 7 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು-ಉಪಾಧ್ಯಕ್ಷರು ಮತ್ತು ಗ್ರಾಮಸ್ಥರು ಎಚ್ಚರಿಕೆಯನ್ನು ನೀಡಿದ್ದಾರೆ.
ಬೆಳಗಾವಿ-ವೆಂಗುರ್ಲಾ ಸಂಪರ್ಕ ರಸ್ತೆಯೂ ಹದಗೆಟ್ಟು ಹೋಗಿದ್ದು, ಈ ರಸ್ತೆಯ ಮಾರ್ಗವಾಗಿ ಸಂಚರಿಸುವ 7 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಜನರು ರೋಸಿ ಹೋಗಿದ್ದಾರೆ. ಅಭಿವೃದ್ಧಿ ಕಾಣದ ರಸ್ತೆಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ಎದುರಾಗಿದ್ದು, ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಪ್ರತಿಭಟನೆಯನ್ನು ನಡೆಸಿದರು.
ಬೆಳಗಾವಿಯ ಪಶ್ಚಿಮ ಭಾಗದ 7 ಗ್ರಾಮ ಪಂಚಾಯಿತಿಗಳ ಅಸ್ತಿತ್ವದಲ್ಲಿ ಬರುವ 30-35 ಗ್ರಾಮದ ಜನರು ಈ ರಸ್ತೆಯನ್ನು ಬಳಸುತ್ತಾರೆ. ಪ್ರತಿನಿತ್ಯ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಈ ರಸ್ತೆಯ ಅಗಲೀಕರಣ ಶೀಘ್ರದಲ್ಲೇ ಮಾಡುವುದು ಅವಶ್ಯಕವಾಗಿದೆ. ಅದಕ್ಕೂ ಮುನ್ನ ರಸ್ತೆಗೆ ಬೀದಿ ದೀಪಗಳನ್ನು ಅಳವಡಿಸಿ, ರಸ್ತೆಯ ಅಭಿವೃದ್ಧಿಯನ್ನು ಕೈಗೊಂಡು ಪ್ರತಿದಿನ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಯಬೇಕಾಗಿದೆ. ಹಿಂದೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದರೂ ಆದರೇ ಇನ್ನು ಯಾವುದೇ ಕ್ರಮ ಕೈಗೊಂಡಿಲ್ಲ. 15 ದಿನದಲ್ಲಿ ರಸ್ತೆಯ ಅಭಿವೃದ್ಧಿಯಾಗದಿದ್ದರೇ, ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ಹಿಂಡಲಗಾ ಶ್ರೀ ಗಣೇಶ ಮಂದಿರ, ಸುಳಗಾ, ಉಚಗಾಂವ ಕ್ರಾಸ್, ತುರಮುರಿ, ಬೆಕ್ಕಿನಕೇರೆ ಗ್ರಾಮ ರಸ್ತೆ ಹದಗೆಟ್ಟು ಹೋಗಿದೆ. ಶಿನೋಳಿಯ ವರೆಗೂ ಒಳ್ಳೆಯ ರಸ್ತೆಯನ್ನು ನಿರ್ಮಿಸಬೇಕು. ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ರಸ್ತೆಯನ್ನು ಮಹಾರಾಷ್ಟ್ರ ಸರ್ಕಾರ ಅಭಿವೃದ್ಧಿಗೊಳಿಸಿದೆ. ಆದರೇ ಕರ್ನಾಟಕ ಸರ್ಕಾರ ಏಕೆ ಮಲತಾಯಿ ಧೋರಣೆ ತೋರುತ್ತಿದೆ? ತಿಳಿಯುತ್ತಿಲ್ಲವೆಂದು ಬೆಕ್ಕಿನಕೇರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ಗಾವಡೆ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ 7 ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ಧರು.