ಬೇರೆ ಜೈಲಿಗೆ ದರ್ಶನ್ ಸ್ಥಳಾಂತರ ಮಾಡುವ ತೀರ್ಮಾನ ನಾವು ಮಾಡಲಾಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ ಜೈಲು ಪ್ರಾಧಿಕಾರವು ಕೋರ್ಟಿನ ನಿರ್ದೇಶನ ಮೇರೆಗೆ ನಟ ದರ್ಶನ್ ಅನ್ನು ಸ್ಥಳಾಂತರ ಮಾಡಲಿದೆ. ವಿಚಾರಣಾ ಖೈದಿ ಆಗಿರುವ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳಡಿ ಸ್ಥಳಾಂತರ ಆಗಲಿದೆ. ಇನ್ನು ಎರಡು ಮೂರು ದಿನಗಳಲ್ಲಿ ದರ್ಶನ್ ಬೇರೆ ಜೈಲಿಗೆ ಶಿಫ್ಟ್ ಆಗಲಿದ್ದಾರೆ ಎಂದು ತಿಳಿಸಿದರು.
ಪರಪ್ಪನ ಅಗ್ರಹಾರ ಜೈಲು ಮೂರು ವಿಭಾಗ ಮಾಡುವ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಭದ್ರತೆ ದೃಷ್ಟಿಯಿಂದ ಆಂತರಿಕ ಆಡಳಿತದ ಸೆಟಪ್ ಮಾಡಬಹುದು. ಜೈಲನ್ನು ಆದರೆ ಮೂರು ಭಾಗ ಮಾಡಲು ಆಗುವುದಿಲ್ಲ. ಬ್ಲಾಕ್ ವಾರು, ಬ್ಯಾರಕ್ ವಾರು ವಿಭಾಗಗಳಾಗಿ ಮಾಡಬಹುದು. ಅದು ಜೈಲು ಆಡಳಿತದವರಿಗೆ ಸಂಬಂಧಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.
ನಿನ್ನೆ ನಾನು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಪರಿಶೀಲಿಸಿದ್ದೇವೆ. ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಜೈಲಿನಲ್ಲಿ ಕೆಲವು ಲೋಪಗಳು ನಮಗೆ ಕಂಡು ಬಂದಿವೆ. ವಿಲ್ಸನ್ ಗಾರ್ಡನ್ ನಾಗನಿಗೆ ಒಂದು ಬ್ಯಾರಕ್ ನಿಂದ ಮತ್ತೊಂದು ಬ್ಯಾರಕ್ ಗೆ ಹೋಗಲು ಅವಕಾಶ ಕೊಟ್ಟಿದ್ದಾರೆ ಎಂಬುದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿದೆ.
ಈ ದೃಶ್ಯಾವಳಿಗಳನ್ನು ಗಮನಿಸಿಯೇ ನಾವು ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ. ದರ್ಶನ್ ರಾಜಾತಿಥ್ಯಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆದ ಹಿನ್ನೆಲೆಯಲ್ಲಿ ಈಗಾಗಲೇ 9 ಜೈಲು ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ.
ಮೊದಲು ಏಳು ಮಂದಿ ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ನಂತರ ಚೀಫ್ ಸೂಪರಿಂಟೆಂಡೆಂಟ್ ಹಾಗೂ ಸೂಪರಿಂಟೆಂಡೆಂಟ್ ಅವರನ್ನು ಅಮಾನತು ಮಾಡಲಾಯಿತು ಎಂದು ಅವರು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.
ಇನ್ನೂ ಜೈಲಿನಲ್ಲಿ ನಟ ದರ್ಶನ್ಗೆ ಯಾರೆಲ್ಲ ಸಹಕಾರ ನೀಡಿದ್ದಾರೆಯೋ ಅವರನ್ನು ಅಮಾನತು ಮಾಡಲಾಗಿದೆ. ಘಟನೆ ಕುರಿತ ತನಿಖೆ ಮುಂದುವರಿದಿದ್ದು, ಇವತ್ತು ತನಿಖಾಗಾಗಿ ಐಪಿಎಸ್ ಅಧಿಕಾರಿಯೊಬ್ಬರು ನೇಮಕ ಮಾಡುತ್ತೇವೆ. ವರದಿ ಆಧರಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.