ಯಾದಗಿರಿಯಲ್ಲಿ ಮೃತಪಟ್ಟ ಪಿಎಸ್ ಐ ಪರಶುರಾಮ್ ಅವರ ಕುಟುಂಬದ ಸದಸ್ಯರಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದ ಪರಶುರಾಮ್ ಮನೆಗೆ ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿ ಘಟನೆ ದಿನ ಎನಾಯಿತು? ಮಗನ ಪರಿಸ್ಥಿತಿ ಹೇಗಿತ್ತು? ಎನ್ನುವ ವಿಷಯವನ್ನು ಪರಶುರಾಮ್ ಪೋಷಕರಿಂದ ತಿಳಿದುಕೊಂಡರು.
ಆರ್ ಅಶೋಕ್ ಮನೆಯಂಗಳಕ್ಕೆ ಕಾಲಿಡುತ್ತಿದ್ದಂತೆ ಕುಟುಂಬದವರ ದುಃಖದ ಕಟ್ಟೆ ಒಡೆಯಿತು. ಪರಶುರಾಮ್ ತಂದೆ ಜನಕರಾಜ ಹಾಗೂ ತಾಯಿ ಗಂಗಮ್ಮ ನಾಯಕರ ಮುಂದೆ ಕಣ್ಣೀರು ಸುರಿಸಿದರು. ನಿಮ್ಮೊಂದಿಗೆ ನಾವಿದ್ದೇವೆ, ಎದೆಗುಂದಬೇಡಿ ಎಂದು ಅಶೋಕ್ ಧೈರ್ಯ ತುಂಬಿದರು.
ನಿಮ್ಮೊಂದಿಗೆ ನಾವಿದ್ದೇವೆ, ಎದೆಗುಂದಬೇಡಿ. ನಾನು ಗೃಹ ಇಲಾಖೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಎರಡು ವರ್ಷದವರೆಗೆ ವರ್ಗಾವಣೆ ಮಾಡುವಂತಿಲ್ಲ. ಹಣ ಹಾಗೂ ಒತ್ತಡ ಹಾಕಿ ವರ್ಗಾವಣೆ ಮಾಡಿದ್ದು ಸರಿಯಲ್ಲ. ವಿಷಯ ತಿಳಿದೇ ನಾನು ಇಲ್ಲಿಗೆ ಬಂದಿರುವೆ. ನೀವು ಘಟನೆ ವಿವರ ಕೊಡಿ. ನಾನು ನಿಮ್ಮ ಜೊತೆ ಇರುವೆ. ಅನ್ಯಾಯ ಸಹಿಸಲ್ಲ. ಇಷ್ಟಕ್ಕೆ ಬಿಡಲ್ಲ. ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು. ಅಲ್ಲಿವರೆಗೂ ಸುಮ್ಮನಿರಲ್ಲ ಎಂದು ಪರಶುರಾಮ್ ಕುಟುಂಬಕ್ಕೆ ಧೈರ್ಯ ತುಂಬಿದರು.
ಅಸ್ಪೃಶ್ಯತೆ ಆಚರಣೆ ಅಂಬೇಡ್ಕರ್ ಗೆ ಮಾಡಿದ ಅವಮಾನ. ಇದು ಸರಿಯಲ್ಲ. ನಾನು ಸಚಿವನಾಗಿದ್ದಾಗ ಹಲವರು ದಲಿತ ಸಮುದಾಯ ಅಧಿಕಾರಿಗಳಿದ್ದರು. ಜಾತಿ ಮುಖ್ಯ ಅಲ್ಲ. ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ. ನಾನು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸುವೆ ಎಂದು ಭರವಸೆ ನೀಡಿದರು.
ಮೃತ ಪಿಎಸ್ ಐ ಪರಶುರಾಮ್ ಪತ್ನಿ ತವರುಮನೆ ರಾಯಚೂರಿನಲ್ಲಿದ್ದು, ಅವರ ತಂದೆಗೆ ಕರೆ ಮಾಡಿದ ಅಶೋಕ್ ಸಾಂತ್ವಾನ ಹೇಳಿದರು. ನನಗೆ ವಿಷಯ ತಿಳಿದ ತಕ್ಷಣ ಮೈಸೂರಿನಿಂದ ಸೋಮನಾಳ ಗ್ರಾಮಕ್ಕೆ ಬಂದಿರುವೆ. ನೀವು ಅಲ್ಲಿರುವುದು ಗೊತ್ತಾಗಲಿಲ್ಲ. ತೊಂದರೆ ಇಲ್ಲ. ನಿಮಗೆ ನ್ಯಾಯ ಸಿಗುವವರೆಗೆ ನಿಮ್ಮ ಜೊತೆಗಿರುವೆ ಎಂದು ಹೇಳಿದ್ರು .
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿ ಪಕ್ಷ ನಾಯಕ ಆರ್ ಅಶೋಕ್ ಪರಶುರಾಮ್ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು 50 ಲಕ್ಷ ರೂ. ಪರಿಹಾರ ಕೊಡಬೇಕು. ಪರಶುರಾಮ್ ಮಗನ ವಿದ್ಯಾಭ್ಯಾಸ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.