ಚೆನ್ನೈ: 17ನೇ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಒಂದೇ ದಿನ ಬಾಕಿಯಿದೆ. ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ

ಚೆನ್ನೈನಲ್ಲಿ ನಡೆಯಲಿರುವ 2024ರ ಐಪಿಎಲ್ ನ ಮೊದಲ ಪಂದ್ಯವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅದಕ್ಕೆ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಶಾಕ್ ನೀಡಿದೆ. ಅದುವೇ ನಾಯಕತ್ವ ಬದಲಾವಣೆ.
ಹೌದು, ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ತಂಡದ ನಾಯಕತ್ವದ ಜವಾಬ್ದಾರಿಯಿಂದ ದೂರವಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಹ್ಯಾಂಡಲ್ ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಸಿಎಸ್ ಕೆ ತಂಡದ ಮುಂದಿನ ನಾಯಕನಾಗಿ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನು ನೇಮಿಸಲಾಗಿದೆ

ಕೆಲವು ದಿನಗಳ ಹಿಂದೆ ಧೋನಿ ಅವರು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ‘ಈ ಬಾರಿ ಹೊಸ ಜವಾಬ್ದಾರಿಗೆ ಎದುರು ನೋಡುತ್ತಿರುವುದಾಗಿ’ ಹೇಳಿದ್ದರು. ಅದು ನಾಯಕತ್ವ ಬದಲಾವಣೆ ಬಗ್ಗೆ ಎನ್ನುವುದು ಇದೀಗ ಖಚಿತವಾಗಿದೆ.