ಚಿತ್ರದುರ್ಗ: ರಾಜ್ಯದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿ ತೆರೆಯಲು ಸರ್ಕಾರವೇ ಪರವಾನಗಿ ನೀಡಲಿದೆ ಎಂಬ ವಿಚಾರವಾಗಿ ಪರ-ವಿರೋಧದ ಚರ್ಚೆಗಳು ಜೋರಾಗಿ ನಡೆದಿರುವ ಬೆನ್ನಲ್ಲೇ ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ನಮ್ಮ ಸರ್ಕಾರ ಮದ್ಯದ ಅಂಗಡಿ ತೆರೆಯುವುದಿಲ್ಲ. ಬಿಜೆಪಿ ಆಡಳಿತದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ನಮ್ಮ ಅವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಗ್ಯಾರಂಟಿ ಯೋಜನೆ, ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಹಾಗಾಗಿ ಮದ್ಯದಂಗಡಿ ತೆರೆಯುವ ಯಾವುದೇ ಉದ್ದೇಶವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬಾರ್ ತೆರೆಯುವ ನಿರ್ಧಾರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಲವರು ಇದು ಒಳ್ಳೆಯ ನಿರ್ಧಾರ ಎಂದು ಖುಷ್ ಆದರೂ, ಇದಕ್ಕೆ ರಾಜ್ಯಾದ್ಯಂತ ವಿರೋಧದ ಕೂಗು ಕೇಳಿಬಂದಿತ್ತು. ಜನರಿಂದ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದರಿಂದ ಈ ನಿರ್ಧಾರದಿಂದ ಸರ್ಕಾರ ಕೊನೆಗೂ ಹಿಂದೆ ಸರಿದಿದೆ.
ಕುಡಿತ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ: ಡಿಕೆಶಿ
ಇದೇ ವಿಚಾರವಾಗಿ ರಾಮನಗರದಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಳೆದ 30 ವರ್ಷದಿಂದ ಯಾವುದೇ ಅಬಕಾರಿ ಲೈಸೆನ್ಸ್ ನೀಡಿಲ್ಲ. ಹಳ್ಳಿಗಳಲ್ಲಿ ನಾವು ಬಾರ್ ತೆಗೆಯುವುದಿಲ್ಲ. ಈ ಬಗ್ಗೆ ಚರ್ಚಿಸಿ ಸೂಕ್ತ ಪ್ರದೇಶಗಳಲ್ಲಿ ಬಾರ್ಗಳನ್ನು ತೆರೆಯಲಾಗುವುದು. ಕುಡಿಯುವುದನ್ನು ಯಾರೂ ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
