Khanapur

ಖಾನಾಪುರ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಡಾ.ಹೇಮಾವತಿ ಸೋನೊಳ್ಳಿ ಆಯ್ಕೆ

Share

ಲೋಂಡಾ ಗ್ರಾಮದಲ್ಲಿ ಫೆಬ್ರುವರಿ 12 ರಂದು ಜರುಗುವ ಏಳನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ  ಪ್ರಾಧ್ಯಾಪಕಿ, ಸಾಹಿತಿ, ಸಂಘಟಕಿಯಾಗಿ ಗುರುತಿಸಿಕೊಂಡಿರುವ ಡಾ.ಹೇಮಾವತಿ ಸೋನೊಳ್ಳಿ

: ಖಾನಾಪುರ ತಾಲ್ಲೂಕಿನ ಲೋಂಡಾ ಗ್ರಾಮದಲ್ಲಿ ಫೆಬ್ರುವರಿ 12 ರಂದು ಜರುಗುವ ಏಳನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಸ್ಥಾನದ ಭಾಗ್ಯ ಡಾ.ಹೇಮಾವತಿ ಸೋನೊಳ್ಳಿ ಇವರಿಗೆ ಒಲಿದು ಬಂದಿದೆ.

ಖಾನಾಪುರದ ಸುಪ್ರಸಿದ್ಧ ವ್ಯಾಪಾರಸ್ಥ ಸೋನೊಳ್ಳಿ ಮನೆತನದಲ್ಲಿ ತಂದೆ ದುಂಡಪ್ಪ ಸೋನೊಳ್ಳಿ, ತಾಯಿ ಶಕುಂತಲಾ ಇವರ ಉದರದಲ್ಲಿ 12 ಡಿಸೆಂಬರ್ 1960 ರಲ್ಲಿ ಇವರು ಜನಿಸಿದರು. ಖಾನಾಪುರ ಮತ್ತು ನಂದಗಡದಲ್ಲಿ ಪ್ರಾಥಮಿಕ ಶಿಕ್ಷಣ,ಬಿ.ಎ ಪದವಿ ಶಿಕ್ಷಣವನ್ನು ಕಿತ್ತೂರ ನಾಡ ವಿದ್ಯಾವರ್ದಕ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಡೆದಿದ್ದಾರೆ. 1984 ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದಾರೆ.1984 ರಿಂದ ಇವರು ನಂದಗಡದ ಎನ್.ಆರ್.ಇ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಬೋಧಿಸುತ್ತಾ ಹಾಗೂ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ 2014 ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ಡಾ.ಹೇಮಾ ಅವರ ಪತಿ ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿಯ ನಿವೃತ್ತ ಶಾಖಾಧಿಕಾರಿಗಳು.ಇವರಿಗೆ ಮೂವರು ಮಕ್ಕಳು. ಡಾಕ್ಟರ್ ಸ್ನೇಹಾ, ಇಂಜಿನಿಯರ್ ತೃಪ್ತಿ , ಮಗ ವಿಶ್ವನಾಥ. ಎಲ್ ಎಲ್ ಬಿ ಕಲಿತು ಸೇವಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಳಿಯಂದಿರು ಡಾ.ಸುಹಾಸ, ಇಂಜಿನಿಯರ್ ಅನಿರುದ್ಧ. ಮೊಮ್ಮಕ್ಕಳು ಸಾಂಘವಿ ಮತ್ತು ಆರ್ಯ..  ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸುತ್ತ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿದ್ಯಾರ್ಥಿಗಳನ್ನು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೇರೇಪಿಸುತ್ತ ವಿವಿಧ ಕ್ಷೇತ್ರದಲ್ಲಿ ಅವರನ್ನು ತೊಡಗಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕರಿಸುತ್ತಿದ್ದರು.ವಿದ್ಯಾರ್ಥಿಗಳಿಗೆ ಓದಲು ಅನುಕೂಲ ಆಗಬೇಕು ಎನ್ನುವ ದೃಷ್ಟಿಕೋನದಿಂದ ನಂದಗಡ ಮಹಾತ್ಮಾಗಾಂಧಿ ಪಿ.ಯು. ಮಹಾವಿದ್ಯಾಲಯದ ಗ್ರಂಥಾಲಯಕ್ಕೆ ಎರಡು ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದಾರೆ.

ವೃತ್ತಿಯೊಂದಿಗೆ ಭಾಷಣ ಹಾಗೂ ಸಾಹಿತ್ಯ ರಚನೆ ಇವರ ಪ್ರವೃತ್ತಿಗಳಾಗಿವೆ. ಸಾಹಿತ್ಯ ರಚನೆ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡ ಇವರು ಚುಟುಕು ಚಂದ್ರಿಕೆ, ಸೃಷ್ಟಿ ಕಲಾ, ಎಲ್ಲಿರುವೆ, ಸ್ಪಂದನ, ದೈವದಾಟ ಸಂಕಲನಗಳನ್ನು ಹೊರತಂದಿದ್ದಾರೆ.ತುಂತುರು ಆತ್ಮ ಚರಿತ್ರೆ ಹಾಗೂ ಅಪೇಕ್ಷಾ ಸಂಕಲನಗಳು ಸದ್ಯದಲ್ಲೇ ಪ್ರಕಟವಾಗಲಿವೆ.

ವಿವಿಧ ದಾಸೋಹ ಪುಸ್ತಕದ ಸಂಪಾದಕರಲ್ಲಿ ಇವರು ಒಬ್ಬರು, ಲೇಖನಗಳು, ವಿಮರ್ಶಾ ಲೇಖನಗಳು, ಪ್ರಬಂಧಗಳನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಪತ್ರಿಕೆಗಳಲ್ಲಿ ಅಂಕಣ ಬರಹಗಳು ಮೂಡಿ ಬಂದಿವೆ. ಇವರು ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ಮಹಿಳಾ ಕಲ್ಯಾಣಕ್ಕಾಗಿ ಮಕ್ಕಳ ಶ್ರೇಯೋಭಿವೃದ್ದಿಗಾಗಿ ಮಹಿಳೆಯನ್ನು ಕಾನೂನಿನ ಅರಿವಿಗಾಗಿ, ಏಡ್ಸ ಜಾಗೃತಿಗಾಗಿ, ಕರೋನದಲ್ಲಿ ಅಸಹಾಯಕರಿಗೆ ಸಹಾಯ ಹೀಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕೈ ಜೋಡಿಸಿದ್ದಾರೆ.

ಆಕಾಶವಾಣಿಯ ವೇಣು ಧ್ವನಿಯಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಸುವರ್ಣಾ ಪ್ಲಸ್ ಹರಟೆಯಲ್ಲಿ ಭಾಗವಹಿಸಿದ್ದಾರೆ. ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.ಅಖಿಲ ಭಾರತ ಕವಯತ್ರಿಯವರ ಸಂಘದ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ್ದಾರೆ. ಚಂದನ ವಾಹಿನಿಯಲ್ಲಿ ಇವರ ಸಂದರ್ಶನ ಮೂಡಿ ಬಂದಿದೆ.ವಿವಿಧ ಸಂಘ ಸಂಸ್ಥೆಯಿಂದ ಸನ್ಮಾನ ಪಡೆದಿದ್ದಾರೆ. ಶಾಲೆ-ಕಾಲೇಜುಗಳು ಮಠಗಳಿಂದ ಮಹಿಳಾ ಸಂಘಗಳಿಂದ ಸನ್ಮಾನವನ್ನು ಪಡೆದಿದ್ದಾರೆ.

ಸಾಹಿತ್ಯ ಸರಸ್ವತಿ ವಿಶ್ವಚೇತನ, ಜವಾಹರಲಾಲ ನೆಹರು ಸದ್ಭಾವನಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತ ಪ್ರಶಸ್ತಿ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿವೇಕಾನಂದ ಸದ್ಭಾವನಾ ಪ್ರಶಸ್ತಿ, ವಿಶ್ವೇಶ್ವರಯ್ಯಾ ರಾಷ್ಟ್ರೀಯ ರತ್ನ ರಾಷ್ಟ್ರೀಯ ಸಾಹಿತ್ಯ ರತ್ನ ಗಂಗಾಂಬಿಕಾ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ, ಕನ್ನಡಶ್ರೀ ಹೀಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಗುಲ್ಬರ್ಗಾ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದಾರೆ. ಅಕಾಡೆಮಿ ಆಫ್ ಯುನಿವರ್ಸಲ್ ಗ್ಲೋಬಲ್ ಪೀಸ್ ಇವರಿಗೆ ಗೌರವ ಡಾಕ್ಟರೇಟ ನೀಡಿ ಗೌರವಿಸಿದೆ.ವಿವಿಧ ಸಂಘಟನೆಗಳ ಸದಸ್ಯತ್ವ ಹೊಂದಿದ್ದಾರೆ. ಖಾನಾಪೂರ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ ಖಾನಾಪೂರ ತಾಲ್ಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಖಾನಾಪೂರ ತಾಲ್ಲೂಕಾ ಕದಳಿ ವೇದಿಕೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘ ಸಂಸ್ಥೆಗಳ ಮಹಿಳಾ ಪ್ರತಿನಿಧಿಯಾಗಿದ್ದಾರೆ. ಬೆಳಗಾವಿ ಜಿಲ್ಲಾ ಪೃಥ್ವಿ ಪೌಂಡೇಶನ್ ಅಧ್ಯಕ್ಷರಾಗಿದ್ದಾರೆ. ಹಾಗೂ ಲಿಂಗಾಯತ ಮಹಿಳಾ ಸಮಾಜದ ಸದಸ್ಯರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದಾರೆ. ಅಖಿಲ ಭಾರತ ಕವಯಿತ್ರಿಯರ ಸಂಘದ ಸದಸ್ಯರಾಗಿದ್ದು ಈಗ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾರೆ. ಇವರ ಸಾಹಿತ್ಯ ಸೇವೆ ಸದಾ ಮುಂದುವರೆಯಲಿ ಎಂದು ಆಶಿಸೋಣ.

Tags:

error: Content is protected !!