ತಂದೆ ಮತ್ತು ಸಹೋದರನಂತೆ ಸೈನ್ಯ ಸೇರಿ ತಾನು ದೇಶ ಸೇವೆ ಮಾಡಬೇಕು ಎಂಬ ಕನಸು ಕಂಡಿದ್ದ ಯುವಕನೊರ್ವ ತನ್ನ ಕನಸು ಈಡೇರುವ ಮುನ್ನವೇ ಬಾರದ ಲೋಕಕ್ಕೆ ಪಯಣ ಬೆಳೆಸಿರುವ ಹೃದಯವಿದ್ರಾವಕ ಘಟನೆ ಖಾನಾಪುರದಲ್ಲಿ ಸಂಭವಿಸಿದೆ.
ಹೌದು ಸುರೇಶ್ ಉರ್ಫ್ ನಿಲೇಶ್ ಬಾಳಕೃಷ್ಣ ಶಿಂಧೆ ಎಂಬ ಯುವಕನೇ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿರುವ ಯುವಕ. ಮೂಲತಃ ಜಾಡ ನಾವಗಾ ಗ್ರಾಮದ ನಿಲೇಶ ಕುಟುಂಬ ಸಧ್ಯ ಖಾನಾಪುರದ ಮಾರುತಿ ನಗರದಲ್ಲಿ ವಾಸವಿತ್ತು. ಮೃತ ನಿಲೇಶ್ ಕಾರಲಗಾ ಗ್ರಾಮದಿಂದ ಖಾನಾಪುರಕ್ಕೆ ಬರುತ್ತಿದ್ದ ವೇಳೆ ಆತನ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಸೇತುವೆಯಿಂದ ಕೆಳಗೆ ಕುಸಿದು ಬಿದ್ದ ಕಾರಣ ಗಾಯಗೊಂಡಿದ್ದ. ಈ ವೇಳೆ ಹಲವು ಗಂಟೆ ಕಾಲ ಅಪಘಾತ ಸಂಭವಿಸಿದ ಸ್ಥಳದಲ್ಲಿಯೇ ಬಿದ್ದಿದ್ದ. ಇದರಿಂದ ಸೂಕ್ತ ಚಿಕಿತ್ಸೆ ದೊರೆಯದೇ ತೀವ್ರ ರಕ್ತಸ್ರಾವವಾಗಿ ನಿಲೇಶ ಮೃತನಾಗಿದ್ದ. ಶನಿವಾರವಷ್ಟೇ ಮೃತ ನಿಲೇಶನ ಹುಟ್ಟು ಹಬ್ಬವಿತ್ತು. ಸ್ನೇಹಿತರು ಕುಟುಂಬಸ್ಥರ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ. ಆದ್ರೆ ಮಾರನೇ ದಿನವೇ ಈ ರೀತಿ ಅಪಘಾತ ಸಂಭವಿಸಿ ಸಾವಿಗೀಡಾಗುತ್ತಾನೆ ಎಂದು ಯಾರೂ ಕೂಡ ಊಹಿಸಿರಲಿಲ್ಲ.
ಮಗನ ಕಳೆದುಕೊಂಡ ಕುಟುಂಬಸ್ಥರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನೇ ಆಗಲಿ ದೇಶ ಸೇವೆ ಮಾಡಬೇಕು ಎಂಬ ಕನಸು ಕಂಡಿದ್ದ ಯುವಕನೊರ್ವ ಈ ರೀತಿ ದುರಂತ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಾಸವೇ ಸರಿ.