ಮೊಟ್ಟಮೊದಲ ವ್ಯಕ್ತಿಯಿಂದ ಕಟ್ಟಕಡೆಯ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯ ಆಶಯಗಳನ್ನು ಒಳಗೊಂಡಿರುವ ಭಾರತ ಸಂವಿಧಾನವು ಸರ್ವರಿಗೂ ದಾರಿದೀಪವಾಗಿದೆ ಎಂದು
ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹೇಳಿದರು.
ಮಹಾನಗರ ಪಾಲಿಕೆಯಲ್ಲಿ ಗುರುವಾರ ಅಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ
ನಮ್ಮ ದೇಶದಲ್ಲಿ ಸರ್ವಧರ್ಮೀಯರನ್ನೂ ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ತತ್ವದ ಅಡಿಯಲ್ಲಿ ಸಮಾನವಾಗಿ ಕಂಡಿರುವ ನಮ್ಮ ಸಂವಿಧಾನವು ಜಗತ್ತಿಗೆ ಮಾದರಿಯಾಗಿದೆ.
ಇಂಥ ಆದರ್ಶಮಯ ಸಂವಿಧಾನವನ್ನು ರಚಿಸಿ ದೇಶವಾಸಿಗಳಿಗೆ ಕೊಟ್ಟಿರುವ
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಆಶಯಗಳನ್ನು ಪ್ರತಿಯೊಬ್ಬ ನಾಗರಿಕ ಅರಿತುಕೊಳ್ಳಬೇಕು.
ಹಕ್ಕುಗಳನ್ನು ಅನುಭವಿಸುವುದರ ಜೊತೆಗೆ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಿ ರಾಷ್ಟ್ರದ ಅಭಿವೃದ್ಧಿಗೆ ಎಲ್ಲರೂ ಬದ್ಧರಾಗಿರಬೇಕೆಂದು ಹೇಳಿದರು. ನಗರ ಸೇವಕ ಸಂದೀಪ ಜೀರಗ್ಯಾಳ ಮಾತನಾಡಿ, ರಾಷ್ಟ್ರದ ಗಟ್ಟಿ ಅಡಿಪಾಯವೇ ಸಂವಿಧಾನವಾಗಿದ್ದು, ದೇಶಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮೊದಲು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಸಂವಿಧಾನದ ಪೀಠಿಕೆಯನ್ನು ಓದಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೆಕರ್, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗೂ ನಗರಸೇವಕರು,
ಆಡಳಿತ ಶಾಖೆ ಉಪ ಆಯುಕ್ತ, ಉದಯಕುಮಾರ ಬಿ.ಟಿ.,
ಕಂದಾಯ ಶಾಖೆ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಅಭಿವೃದ್ಧಿ ಶಾಖೆ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
