Belagavi

ಅಕ್ರಮ ಸಂಬಂಧ ಪ್ರಶ್ನಿಸಿದ ಮಗನ ಕೊಲೆ: ತಾಯಿ ಸೇರಿ 6 ಆರೋಪಿಗಳ ಬಂಧನ!

Share

ತಾಯಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ 24 ವರ್ಷದ ಮಗನನ್ನು ತಂಪು ಪಾನೀಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ಕುಡಿಸಿ, ಬಳಿಕ ಕುತ್ತಿಗೆಗೆ ಶಾಲಿನಿಂದ ಬಿಗಿದು ಕೊಲೆ ಮಾಡಿದ ಪ್ರಕರಣವನ್ನು ಬೆಳಗಾವಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ತಾಯಿ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.3ರಂದು ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೆಎಲ್‌ಇ ಛತ್ರಿ ಸಮೀಪ ಗಟಾರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ, ಮೃತನನ್ನು ವಿಜಯ ನಾರಾಯಣ ಎಂದು ಗುರುತಿಸಲಾಗಿತ್ತು ಎಂದರು.

ಆರೋಪಿ ರಾಕೇಶ ಜಾಮೂನಿ ಮತ್ತು ಮೃತನ ತಾಯಿ ಮೀನಾ ನಾರಾಯಣ ನಡುವೆ ಅನೈತಿಕ ಸಂಬಂಧವಿತ್ತು. ಇದನ್ನು ಮಗ ವಿಜಯ ಪ್ರಶ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡುವಂತೆ ಮೀನಾ, ರಾಕೇಶನಿಗೆ ಸೂಚಿಸಿದ್ದಳು ಎನ್ನಲಾಗಿದೆ. ಅದರಂತೆ ರಾಕೇಶ ವಿಜಯನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ, ಇತರ ಆರೋಪಿಗಳ ಸಹಕಾರದಿಂದ ತಂಪು ಪಾನೀಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ಕುಡಿಸಿದ್ದಾನೆ. ಬಳಿಕ ಪ್ರಜ್ಞೆ ತಪ್ಪಿದ ವಿಜಯನ ಕುತ್ತಿಗೆಗೆ ಶಾಲು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದರು.

ನಂತರ ಆರೋಪಿಗಳಾದ ಸಚಿನ ಕಾಂಬಳೆ, ಮನೋಜ ಕಾಂಬಳೆ, ತಮ್ಮಣ್ಣ ಕಾಂಬಳೆ ಹಾಗೂ ಏಕನಾಥ ಕಾಂಬಳೆ ಸಹಕಾರದಿಂದ ಶವವನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದ ಗಟಾರದಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು ಎಂದರು.
ಪ್ರಕರಣದಲ್ಲಿ ಮೃತನ ತಾಯಿ ಮೀನಾ ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

Tags:

error: Content is protected !!