ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯ ಕರಾಳ ದಿನಾಚರಣೆ ಯತ್ನ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಜಿಲ್ಲಾಡಳಿತದ ಅನುಮತಿ ಇಲ್ಲದೆ ರ್ಯಾಾಲಿ ನಡೆಸಲು ಹೊರಟ ಎಂಇಎಸ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರ್ಯಾ ಲಿಗೆ ನುಗ್ಗಲು ಯತ್ನಿಸಿದ ಕರವೇ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ನಡ ರಾಜ್ಯೋತ್ಸವ ಸಂಭ್ರಮದ ನಡುವೆಯೇ ಬೆಳಗಾವಿಯ ಗೋಗಟೆ ಸರ್ಕಲ್ ಬಳಿ ಎಂಇಎಸ್ ರ್ಯಾಲಿಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು. ಎಂಇಎಸ್ ಸಂಘಟನೆಯು ಕಾನೂನುಬಾಹಿರವಾಗಿ ಕರಾಳ ದಿನದ ರ್ಯಾವಲಿ ಆಯೋಜಿಸಿರುವುದನ್ನು ಖಂಡಿಸಿ, ಅದನ್ನು ತಡೆಯಲು ನುಗ್ಗಿದ ಕರವೇ ಮುಖಂಡ ವಾಜೀದ್ ಹಿರೇಕೂಡಿ ಸೇರಿದಂತೆ 10ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಂಡರು.

ಇದಕ್ಕೂ ಮುನ್ನ ಎಂಇಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕರವೇ ಮುಖಂಡ ವಾಜೀದ್ ಹಿರೇಕೂಡಿ, “ಬೆಳಗಾವಿಯಲ್ಲಿ ರಾಜ್ಯೋತ್ಸವ ವೈಭವದಿಂದ ನಡೆಯುತ್ತಿರುವಾಗ ಎಂಇಎಸ್ ಕಾರ್ಯಕರ್ತರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ಕನ್ನಡಿಗ ಹಾಗೂ ನಮ್ಮ ಹೆಮ್ಮೆಯ ಸಂಕೇತ, ಅವರ ಹೆಸರನ್ನು ಎಂಇಎಸ್ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಜಿಲ್ಲಾಡಳಿತವು ಯಾವುದೇ ಕಾರಣಕ್ಕೂ ಇಂತಹ ನಾಡದ್ರೋಹಿ ಚಟುವಟಿಕೆಗಳಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದ ಅವರು, ಪೊಲೀಸರು ಕನ್ನಡ ಕಾರ್ಯಕರ್ತರನ್ನು ತಡೆಯದೆ ಶಾಂತಿಯುತವಾಗಿ ರಾಜ್ಯೋತ್ಸವ ಆಚರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸ್ಥಳದಲ್ಲಿ ಬಿಗಡಾಯಿಸಿದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸ್ ಇಲಾಖೆ ಹೆಚ್ಚುವರಿ ಬಂದೋಬಸ್ತ್ ಏರ್ಪಡಿಸಿದೆ.
