ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ರೈತರ ಆಕ್ರೋಶದ ಕಿಚ್ಚು ತೀವ್ರಗೊಂಡಿದೆ. ರೈತ ಮುಖಂಡ ಚೂನ್ನಪ್ಪ ಪೂಜಾರಿ ಬಂಧನ ಖಂಡಿಸಿ ಟೋಲ್ ಗೇಟ್ ಬಂದ್ ಮಾಡಿದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹಿರೇಬಾಗೇವಾಡಿ ಬಸವೇಶ್ವರ ವೃತ್ತದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ರೈತರ ಪ್ರತಿಭಟನೆ ಉಗ್ರ ರೂಪ ತಾಳಿದೆ. ರೈತ ಹೋರಾಟದ ಮುಂಚೂಣಿಯಲ್ಲಿದ್ದ ಪ್ರಮುಖ ಮುಖಂಡ ಚೂನ್ನಪ್ಪ ಪೂಜಾರಿ ಹಾಗೂ ಇತರ ರೈತ ನಾಯಕರನ್ನು ಪೊಲೀಸರು ಏಕಾಏಕಿ ಬಂಧಿಸಿರುವುದನ್ನು ಖಂಡಿಸಿ ನೂರಾರು ರೈತರು ಬೀದಿಗಿಳಿದಿದ್ದಾರೆ. ಆಕ್ರೋಶಗೊಂಡ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯ ಹಿರೇಬಾಗೇವಾಡಿ ಟೋಲ್ ಗೇಟ್ಗೆ ನುಗ್ಗಿ, ವಾಹನ ಸಂಚಾರವನ್ನು ಸಂಪೂರ್ಣವಾಗಿ ತಡೆದು ಬಂದ್ ಆಚರಿಸಿದರು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಟೋಲ್ ಬಂದ್ ಮಾಡಲು ಯತ್ನಿಸಿದ ರೈತರನ್ನು ಬಲವಂತವಾಗಿ ವಶಕ್ಕೆ ಪಡೆದರು.

ಪೊಲೀಸರ ಈ ಕ್ರಮದಿಂದ ಮತ್ತಷ್ಟು ಕೆರಳಿದ ರೈತರು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಹಿರೇಬಾಗೇವಾಡಿ ಪಟ್ಟಣದ ಪ್ರಮುಖ ಕೇಂದ್ರವಾದ ಬಸವೇಶ್ವರ ವೃತ್ತಕ್ಕೆ ಸಾವಿರಾರು ಸಂಖ್ಯೆಯಲ್ಲಿ ನುಗ್ಗಿ ಬೃಹತ್ ಬಂದ್ ನಡೆಸಲು ಕರೆ ನೀಡಿದ್ದು, ಸ್ಥಳದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖಂಡ ಚೂನ್ನಪ್ಪ ಪೂಜಾರಿ ಸೇರಿದಂತೆ ಬಂಧಿತ ಎಲ್ಲಾ ರೈತರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದಿರುವ ಹೋರಾಟಗಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

