ನಂದಿಹಳ್ಳಿ ಗ್ರಾಮದ ಶ್ರೀ ವಕಾದೇವಡ ದೇವಿ ದೇವಸ್ಥಾನದ ಆವರಣದಲ್ಲಿ ಶ್ರದ್ಧಾಳುಗಳ ಸಹಕಾರದೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಮಾಜಿ ಮೇಯರ್ ವಿಜಯ್ ಮೋರೆ ಹಾಗೂ ವಿಜಯ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಈ ಸಮಾಜಮುಖಿ ಕಾರ್ಯದಲ್ಲಿ ನೂರಾರು ಟನ್ ತ್ಯಾಜ್ಯವನ್ನು ತೆರವುಗೊಳಿಸಿ, ದೇವಸ್ಥಾನದ ಪಾವಿತ್ರ್ಯತೆಯನ್ನು ಮರುಕಳಿಸಲಾಗಿದೆ.

ಬೆಳಗಾವಿ ತಾಲೂಕಿನ ನಂದಿಹಳ್ಳಿ ಗ್ರಾಮದ ಐತಿಹಾಸಿಕ ಶ್ರೀ ವಕಾದೇವಡ ದೇವಿ ದೇವಸ್ಥಾನದ ಆವರಣದಲ್ಲಿ ಭಕ್ತರು ನಿರಂತರವಾಗಿ ಅನ್ನಸಂತರ್ಪಣೆ ಮತ್ತು ಇತರೆ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುವುದರಿಂದ ಅಲ್ಲಿ ಬಿಸಾಡಿದ ಪ್ಲಾಸ್ಟಿಕ್ ತಟ್ಟೆಗಳು, ಲೋಟಗಳು, ಕಾಗದಗಳು ಹಾಗೂ ಇತರೆ ತ್ಯಾಜ್ಯ ವಸ್ತುಗಳು ದೊಡ್ಡ ಪ್ರಮಾಣದಲ್ಲಿ ಸಂಗ್ರಹಗೊಂಡಿದ್ದವು. ಇದನ್ನು ಮನಗಂಡ ‘ಶಾಂತಾಯಿ ವಿದ್ಯಾ ಆಧಾರ್’ ತಂಡವು ಸ್ಥಳೀಯ ಮುಖಂಡರೊಂದಿಗೆ ಕೈಜೋಡಿಸಿ ಸಂಪೂರ್ಣ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್ ವಿಜಯ್ ಮೋರೆ, ಧಾರ್ಮಿಕ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟು, ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಸಂಸ್ಥೆಯ ವತಿಯಿಂದ ದೊಡ್ಡ ಗಾತ್ರದ ಕಸದ ಬುಟ್ಟಿಗಳನ್ನು (ಡಸ್ಟ್ಬಿನ್) ದೇವಾಲಯಕ್ಕೆ ದೇಣಿಗೆಯಾಗಿ ನೀಡಲಾಗುವುದು ಎಂದು ಘೋಷಿಸಿದರು.

ಈ ಸ್ವಚ್ಛತಾ ಅಭಿಯಾನದಲ್ಲಿ ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಚಂದಗಡ ನಗರ ಪಂಚಾಯತ್ನ ನಗರಾಧ್ಯಕ್ಷರಾದ ಸುನೀಲ್ ಕಣೇಕರ್ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದು ಶ್ರಮದಾನದ ಮಹತ್ವವನ್ನು ಸಾರಿದರು. ಆಲನ್ ವಿಜಯ್, ಗಂಗಾಧರ್ ಪಾಟೀಲ್, ವಿಶ್ವಾಸ್ ಪಾಟೀಲ್, ನಿಲೇಶ್ ರಾಮಗೌಡ, ಸುರಾಜ್ ಗಾವಲಿ, ಶರದ್ ಓಲ್ಕರ್, ಸಂಜಯ್ ಕುಂದೇಕರ್, ಲಕ್ಷ್ಮಣ್ ತಳವಾರ, ದರ್ಶನ್ ಮೋರೆ, ಮಣಿ ವಿಶ್ವಕರ್ಮ, ಸಮರ್ಥ ಕುಂದೇಕರ್ ಸೇರಿದಂತೆ ಅನಿಲ್, ಕಿಶನ್ ಬೊಕಡೆ, ನಮು ಪಾಟೀಲ್, ಎಲ್ಲಪ್ಪ ಕುಂಬಾರ್ ಮುಂತಾದ ಸ್ಥಳೀಯ ನಿವಾಸಿಗಳು ಮತ್ತು ಯುವಕರು ಸಕ್ರಿಯವಾಗಿ ಪಾಲ್ಗೊಂಡು ಶ್ರಮದಾನ ಯಶಸ್ವಿಗೊಳಿಸಿದರು. ಸಾಮೂಹಿಕ ಪ್ರಯತ್ನದಿಂದ ಮಾತ್ರ ಪರಿಸರ ಮತ್ತು ದೇವಸ್ಥಾನದ ಸ್ವಚ್ಛತೆಯನ್ನು ಅಚ್ಚುಕಟ್ಟಾಗಿ ಕಾಯ್ದುಕೊಳ್ಳಲು ಸಾಧ್ಯ ಎಂಬ ಸಂದೇಶವನ್ನು ಈ ಅಭಿಯಾನ ಸಾರಿದೆ.

