ಬೆಳಗಾವಿಯ ಸಾಹಿತಿ, ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕಿ ಡಾ. ಗುರುದೇವಿ ಹುಲೆಪ್ಪನವರಮಠ ಅವರ ಬೆಳಗು ಜಗವ ಮಗು ಕವನ ಸಂಕಲನಕ್ಕೆ ಕಲಬುರ್ಗಿಯ ಶ್ರೀ ಶಿವಯೋಗಿ ಶರಣ ಬಸವ ಟ್ರಸ್ಟ್ನ 2023ನೇ ಸಾಲಿನ ಶಿಶು ಸಾಹಿತ್ಯ ಪುರಸ್ಕಾರ ದೊರೆತಿದೆ.
ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಈ ಕುರಿತು ಟ್ರಸ್ಟ್ನ ಅಧ್ಯಕ್ಷೆ ಶ್ರೀದೇವಿ ಹಚ್ಚಡದ ಮತ್ತು ಡಾ. ನಾನಾಸಾಹೇಬ ಹಚ್ಚಡದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಸಾಹಿತ್ಯ ರಚನೆಗೆ ಅನೇಕ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದ ಶಿವಕವಿ ಉಳುವಿ ಶ್ರೀ ಹುಲೆಪ್ಪನವರಮಠ ಅವರ ಮಗಳಾದ ಡಾ. ಗುರುದೇವಿ ಅವರು, ಅಜ್ಜಿಗೆ ಜೈ ಜೈ ಜೈ, ರೀಚ್ ಬಾಟ್, ಬೆಳಗು ಜಗವ ಮಗು, ನನ್ನ ಹಕ್ಕು ನನ್ನ ಹೆಮ್ಮೆ, ಅಪ್ಪ ನನಗೆ ಬೇಕು ಎನ್ನುವ ಮಕ್ಕಳ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಇವರ ಮಕ್ಕಳ ಸಾಹಿತ್ಯ ಕೃತಿಗಳಿಗೆ ಈ ಹಿಂದೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಪಿ. ವಿಜಯಕುಮಾರ ದತ್ತಿ ಪ್ರಶಸ್ತಿ, ವೇ. ಮೂ. ಶ್ರೀ ವೀರಯ್ಯ ಹಾಗೂ ಮಾತೋಶ್ರೀ ಗದಿಗೆಮ್ಮ ಕರವಿನಕೊಪ್ಪಮಠ ದತ್ತಿ ಪ್ರಶಸ್ತಿ, ಸಾಹಿತ್ಯ ಸಂಸ್ಕೃತಿ ಪ್ರತಿಷ್ಠಾನ ಬೈಲಹೊಂಗಲದ ಶಿಶು ಸಾಹಿತ್ಯ ಜ್ಯೋತಿ ಪ್ರಶಸ್ತಿ, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಶ್ರೀಮತಿ ವಿದ್ಯಾ ಹುಂಡೇಕಾರ ದತ್ತಿ ಪ್ರಶಸ್ತಿ ದೊರೆತಿವೆ.
ಇದಲ್ಲದೆ ನಾಡೋಜ ಮತ್ತು ಬೆಳಗಾವಿಯ ಲೋಕದರ್ಶನ ಸರಳ ಮಾತು ಪತ್ರಿಕೆಗಳು ಅಜ್ಜಿಗೆ ಜೈ ಜೈ ಜೈ ಕವನ ಸಂಕಲನಕ್ಕೆ ನೀಡಿದ ಹಸ್ತಪ್ರತಿಯ ನಗದು ಪುರಸ್ಕಾರವೂ ಇವರಿಗೆ ದೊರೆತಿದೆ.
ಡಾ. ಗುರುದೇವಿ ಅವರ ಸಾಧನೆಗೆ ಬೆಳಗಾವಿಯ ಸಾಹಿತ್ಯಾಸಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
