ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಂದಾನಗರಿ ಬೆಳಗಾವಿಗೆ ಇಂದು ಬೆಳ್ಳಂಬೆಳಗ್ಗೆಯೇ ದೊಡ್ಡ ಆಘಾತ ಎದುರಾಗಿದೆ. ನಗರದ ಮಹಾನಗರ ಪಾಲಿಕೆ ಕಚೇರಿಗೆ ಅನಾಮಧೇಯ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಪಾಲಿಕೆ ಆವರಣದಲ್ಲಿ ತೀವ್ರ ಆತಂಕ ಹಾಗೂ ಆಪರೇಷನ್ ತಲಾಶ್ ಕೈಗೊಳ್ಳಲಾಗಿದೆ.

ದೀಪಾವಳಿ ಹಬ್ಬದ ವಾತಾವರಣದ ನಡುವೆಯೇ ಬೆಳಗಾವಿ ಮಹಾನಗರ ಪಾಲಿಕೆಗೆ ಅನಾಮಧೇಯ ಮೂಲದಿಂದ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ. ಬೆಳಿಗ್ಗೆ ಕಚೇರಿ ವೇಳೆಯಲ್ಲಿ ಆಡಳಿತ ವಿಭಾಗಕ್ಕೆ ಬಂದ ಈ ಮೇಲ್ನಲ್ಲಿ, ಪಾಲಿಕೆ ಕಾರ್ಯಾಲಯದಲ್ಲಿ ಬಾಂಬ್ ಇಡಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಪಾಲಿಕೆ ಆಡಳಿತ ಪಕ್ಷದ ನಾಯಕ ಸಂತೋಷ್ ಪಡ್ನೇಕರ್ ಹಾಗೂ ಅಧಿಕಾರಿಗಳು ತಕ್ಷಣವೇ ಜಾಗೃತರಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದರು. ಮುನ್ನೆಚ್ಚರಿಕಾ ಕ್ರಮವಾಗಿ ಕೆಲಸದ ವೇಳೆಯಲ್ಲಿದ್ದ ಎಲ್ಲ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಕೂಡಲೇ ಕಚೇರಿಯಿಂದ ಹೊರಗೆ ಕಳುಹಿಸಿ ಆವರಣವನ್ನು ಖಾಲಿ ಮಾಡಿಸಲಾಯಿತು.

ವಿಷಯ ತಿಳಿಯುತ್ತಿದ್ದಂತೆ ಮಾರ್ಕೆಟ್ ಸಿಪಿಐ ಕಾಲಿಮಿರ್ಚಿ ನೇತೃತ್ವದಲ್ಲಿ ಪೊಲೀಸ್ ಪಡೆ, ಬಾಂಬ್ ಪತ್ತೆ ದಳ (Bomb Squad) ಮತ್ತು ಶ್ವಾನ ದಳಗಳು (Dog Squad) ಸ್ಥಳಕ್ಕೆ ದೌಡಾಯಿಸಿ ಪೂರ್ಣ ಪ್ರಮಾಣದ ತಪಾಸಣೆ ಕೈಗೊಂಡಿವೆ. ಆಯುಕ್ತರ (Commissioner) ಚೇಂಬರ್, ರೆವಿನ್ಯೂ ಸೆಕ್ಷನ್, ಝೋನ್ ಚೇಂಬರ್, ಹೆಲ್ತ್ ಸೆಕ್ಷನ್ ಹಾಗೂ ಕೆಳಮಹಡಿಯಲ್ಲಿರುವ ಮೇಯರ್, ಉಪಮೇಯರ್ ಚೇಂಬರ್ ಮತ್ತು ಕೌನ್ಸಿಲ್ ಹಾಲ್ ಸೇರಿದಂತೆ ಮೂಲೆ ಮೂಲೆಗಳಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಶೋಧ ಕಾರ್ಯ ಮುಂದುವರಿದಿದೆ.

