ಬೆಳಗಾವಿಯಲ್ಲಿಂದು 71ನೇ ಕನ್ನಡ ರಾಜ್ಯೋತ್ಸವವನ್ನು ಭಾನುವಾರ ಅತ್ಯಂತ ಸಂಭ್ರಮ, ಸಡಗರ ಹಾಗೂ ಕನ್ನಡಾಭಿಮಾನದೊಂದಿಗೆ ಆಚರಿಸಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದರು.


ಸಚಿವರು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಿದ ಬಳಿಕ ನಾಡದೇವತೆ ತಾಯಿ ಶ್ರೀ ಭುವನೇಶ್ವರಿಗೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು. ನಂತರ ನಡೆದ ಪೊಲೀಸ್ ಇಲಾಖೆ, ವಿವಿಧ ಭದ್ರತಾ ಪಡೆಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಸಮಾರಂಭದ ಮೆರುಗು ಹೆಚ್ಚಿಸಿತು. ಶಿಸ್ತುಬದ್ಧ ಹೆಜ್ಜೆ, ಬ್ಯಾಂಡ್ ವಾದನ ಹಾಗೂ ವಿವಿಧ ತಂಡಗಳ ಪ್ರದರ್ಶನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಈ ವೇಳೆ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವಸತೀಶ್ ಜಾರಕಿಹೊಳಿ ಅವರು ೭೧ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕವಿಗಳು, ಸಾಹಿತಿಗಳು ಹಾಗೂ ಜನಪ್ರತಿನಿಧಿಗಳಿಗೆ ಶುಭಾಶಯ ಕೋರಿದ್ದು, ಮುಂಬೈ, ಮದ್ರಾಸ್, ಹೈದರಾಬಾದ್ ಹಾಗೂ ಮೈಸೂರು ಪ್ರಾಂತಗಳಲ್ಲಿದ್ದ ಕನ್ನಡಿಗರನ್ನು ಒಗ್ಗೂಡಿಸಿ ೧೯೫೬ ನವೆಂಬರ್ ೧ರಂದು ವಿಶಾಲ ಮೈಸೂರು ರಾಜ್ಯ (ಕರ್ನಾಟಕ) ಉದಯಿಸಲು ಕಾರಣರಾದ ಆಲೂರು ವೆಂಕಟರಾಯರು ಮತ್ತು ಕೆಂಗಲ್ ಹನುಮಂತಯ್ಯನವರಂತಹ ಮಹಾನುಭಾವರ ಹೋರಾಟವನ್ನು ಸ್ಮರಿಸಿದ್ದಾರೆ. ಈ ಶುಭ ಸಂದರ್ಭದಲ್ಲಿ ವಿವಿಧ ವಲಯಗಳಲ್ಲಿ ಸಾಧನೆಗೈದ ರಾಜ್ಯದ ೭೧ ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ಅದರಲ್ಲೂ ಬೆಳಗಾವಿ ಜಿಲ್ಲೆಯ ಶಿಲ್ಪಕಲೆ ವಿಭಾಗದ ಗೌಡಪ್ಪ ಪರಶುರಾಮ ಬಂಡಿವಡ್ಡರ್, ಸಾಹಿತ್ಯ ವಿಭಾಗದ ಡಾ. ಜಿ.ಎಸ್. ಶಿವಗಲಿ ಹಾಗೂ ವೈದ್ಯಕೀಯ ವಲಯದ ಡಾ. ಸುಜಾತ ಜಾಲಿ ಸೇರಿದಂತೆ ಮೂವರು ಸಾಧಕರಿಗೆ ಪ್ರಶಸ್ತಿ ಸಿಕ್ಕಿರುವುದು ಅತ್ಯಂತ ಸಂತೋಷದ ಸಂಗತಿ ಎಂದಿರುವ ಅವರು, ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆಯ ಜನರ ಐತಿಹಾಸಿಕ ಕೊಡುಗೆಯನ್ನು ವಿಶೇಷವಾಗಿ ಕೊಂಡಾಡಿದ್ದಾರೆ.

ಇದೇ ಸಂದರ್ಭದಲ್ಲಿ ಶಿಕ್ಷಣ, ಸಾಹಿತ್ಯ, ಕಲೆ, ಸಂಸ್ಕೃತಿ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಎಚ್.ಆರ್. ತಿಮ್ಮಾಪೂರ, ಬಸವರಾಜ್ ಕುಪ್ಪಸಗೌಡರ, ಎ.ಎ. ಸನದಿ, ವಿರೇಶ್ ಹಿರೇಮಠ, ಮೈತ್ರಾಯಿಣಿ ಗದಿಗೆಪ್ಪಗೌಡರ, ಮಹಾರಾಜ ಸಿದ್ಧು ಹಳ್ಳೂರ ಇಸ್ಮಾಯಿಲ್ ಪೀರಜಾದೆ, ಆಯೇಷಾ ಸನದಿ, ದುರ್ಗೇಶ ಮೇತ್ರಿ, ಪಂಚಾಕ್ಷರಿ ಗಡ್ಡಿ, ಉಮೇಶ್ ಕಲಘಟಗಿ, ಹೊಳೆಪ್ಪ ನೇಸರಗಿ, ಮುದ್ರಣ ಮಾಧ್ಯಮ ವಿಭಾಗದಲ್ಲಿ ಹೃಷಿಕೇಶ ಬಹದ್ದೂರ ದೇಸಾಯಿ, ಬ್ರಹ್ಮಾನಂದ ಹಡಗಲಿ,ಇಮಾಮಹುಸೇನ್ ಗೂಡುನವರ, ವಿಶ್ವನಾಥ ದೇಸಾಯಿ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಮೈಲಾರಿ ಪಟಾತ್, ಲೋಹಿತ್ ಶಿರೋಳ, ಅಡಿವೆಪ್ಪ ಪಾಟೀಲ, ಸದಾಶಿವ ಜಾಧವ.ಜಿಲ್ಲಾ/ಪ್ರಾದೇಶಿಕ ದಿನಪತ್ರಿಕೆ ಸಂಪಾದಕರ ವಿಭಾಗದಲ್ಲಿ ಶರತಚಂದ್ರ ದೇಸಾಯಿ ಹಾಗೂ ರಾಜಕುಮಾರ್ ಟೋಪಣ್ಣವರ ತಾಲ್ಲೂಕು ವರದಿಗಾರರ ವಿಭಾಗದಲ್ಲಿ ರಾಜು ಗಾಲಿ, ಕೆ.ಎಂ.ಕರ್ನಾಚಿ ಮತ್ತು ಪತ್ರಿಕಾ ವಿತರಕರ ವಿಭಾಗದಲ್ಲಿ ಭೀಮಪ್ಪ ಕೋತೆಕರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಾರಂಭದಲ್ಲಿ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಸಂದೀಪ್ ಪಾಟೀಲ, ನಗರ ಪೊಲೀಸ್ ಆಯುಕ್ತ ನಿಕ್ಕಂ ಪ್ರಕಾಶ್ ಅಮೃತ್, ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

