ರಾಜ್ಯ ಸರ್ಕಾರದ ಮಲತಾಯಿ ಧೋರಣೆ ಹಾಗೂ ಕೇಂದ್ರದ ರೈತ ವಿರೋಧಿ ನೀತಿಯ ವಿರುದ್ಧ ರೈತ ಸಂಘ ತೀವ್ರ ಹೋರಾಟಕ್ಕೆ ಅಣಿಯಾಗಿದೆ. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.

ರಾಜ್ಯಾದ್ಯಂತ ಅನ್ನದಾತರ ಮೇಲೆ ಸರ್ಕಾರಗಳು ತೋರುತ್ತಿರುವ ಮಲತಾಯಿ ಧೋರಣೆಯನ್ನು ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ರವಿ ಪಾಟೀಲ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಮುಂದೆ ವಿವಿಧ ಬೇಡಿಕೆಗಳನ್ನು ಮಂಡಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ರೈತರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಆಡಳಿತಾರೂಢ ನಾಯಕರು ಮೀನಮೇಷ ಎಣಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರಮುಖವಾಗಿ ಸ್ವಾಮಿನಾಥನ್ ಆಯೋಗದ ವರದಿಯಂತೆ C2+50 ಆಧಾರದ ಮೇಲೆ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ವಚನವನ್ನು ತಕ್ಷಣವೇ ಉಳಿಸಿಕೊಳ್ಳಬೇಕು ಎಂದು ರವಿ ಪಾಟೀಲ್ ಆಗ್ರಹಿಸಿದ್ದಾರೆ. ಇಂದಿನ ದಿನಗಳಲ್ಲಿ ಜಮೀನು ನೋಂದಣಿ ಶುಲ್ಕ, ಕೃಷಿ ಉತ್ಪಾದನಾ ವೆಚ್ಚ ಹಾಗೂ ರೈತರ ಮಕ್ಕಳ ಉನ್ನತ ಶಿಕ್ಷಣದ ಖರ್ಚುಗಳು ಗಗನಕ್ಕೇರಿವೆ. ಇದರಿಂದ ಗ್ರಾಮೀಣ ಭಾಗದ ಕುಟುಂಬಗಳು ಜೀವನ ನಡೆಸುವುದು ಅತ್ಯಂತ ದುಸ್ತರವಾಗಿದ್ದು, ಬದುಕು ಭಾರವಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದಲ್ಲದೆ, ಪಶ್ಚಿಮಘಟ್ಟ ಭಾಗದಲ್ಲಿ ಸಮರ್ಪಕ ಮಳೆಯಾಗದ ಕಾರಣ ಬೆಳಗಾವಿ ಜಿಲ್ಲೆಯ ಉಳಿದ ತಾಲೂಕುಗಳನ್ನೂ ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು. ಜಿಲ್ಲೆಯಲ್ಲಿ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನೀರಾವರಿ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹದಗೆಟ್ಟಿರುವ ಗ್ರಾಮೀಣ ಹಾಗೂ ನಗರ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ರಾಜ್ಯ ರೈತ ಸಂಘದ ಸದಸ್ಯರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
