Vijaypura

₹8.30 ಕೋಟಿ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲ; ಮೊಬೈಲ್ ಟಾರ್ಚ್‌ನಲ್ಲೇ ತುರ್ತು ಚಿಕಿತ್ಸೆ!

Share

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಆಸ್ಪತ್ರೆ.. ಸುಸಜ್ಜಿತ ಕಟ್ಟಡ… ತುರ್ತು ಚಿಕಿತ್ಸಾ ವಿಭಾಗವೂ ಇದೆ… ಆದರೆ ಅಪಘಾತದಲ್ಲಿ ಗಾಯಗೊಂಡು ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಮೊಬೈಲ್ ಟಾರ್ಚ್ ಮೊರೆ ಹೋಗಬೇಕಾದ ಪರಿಸ್ಥಿತಿ…! ವಿದ್ಯುತ್ ಕೈಕೊಟ್ಟಿದ್ದೇ ತಡ, ಆಸ್ಪತ್ರೆಯ ತುರ್ತು ವಿಭಾಗವೇ ಕತ್ತಲಲ್ಲಿ ಮುಳುಗಿದೆ. ಗಂಭೀರ ಗಾಯಾಳುಗಳಿಗೆ ಕತ್ತಲಲ್ಲೇ ಚಿಕಿತ್ಸೆ ನೀಡಿದ ಈ ಘಟನೆ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ? ಕೋಟ್ಯಂತರ ರೂಪಾಯಿ ವೆಚ್ಚದ ಆಸ್ಪತ್ರೆಯಲ್ಲೇ ಇಂತಹ ಪರಿಸ್ಥಿತಿ ಎದುರಾಗಿದ್ದೇಕೆ? ಎನ್ನೋ ಕುರಿತು ಇಲ್ಲಿದೆ ಒಂದು ವರದಿ…

ಇದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ನೂತನ ಸಮುದಾಯ ಆರೋಗ್ಯ ಕೇಂದ್ರ. ಮಂಗಳವಾರ ರಾತ್ರಿ ಇಂಡಿ ರಸ್ತೆಯಲ್ಲಿ ಬೊಲೆರೋ, ಟಂಟಂ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ದೇವರಹಿಪ್ಪರಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಆದರೆ ಆಸ್ಪತ್ರೆ ತಲುಪಿದ ಗಾಯಾಳುಗಳು ಹಾಗೂ ಅವರ ಸಂಬಂಧಿಕರಿಗೆ ಎದುರಾಗಿದ್ದು ಮಾತ್ರ ಮತ್ತೊಂದು ಸಂಕಷ್ಟ. ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ತುರ್ತು ಚಿಕಿತ್ಸಾ ವಿಭಾಗವೇ ಕತ್ತಲಲ್ಲಿ ಮುಳುಗಿತ್ತು.

ಇನ್ನೂ ವಿದ್ಯುತ್ ವ್ಯತ್ಯಯದಿಂದ ಪರ್ಯಾಯ ಬೆಳಕಿನ ವ್ಯವಸ್ಥೆಯೂ ಇಲ್ಲದ ಕಾರಣ ವೈದ್ಯಕೀಯ ಸಿಬ್ಬಂದಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಗಾಯಾಳುಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಎದುರಾಯಿತು. ಜನರೇಟರ್ ವ್ಯವಸ್ಥೆ ಇದ್ದರೂ ಡೀಸೆಲ್ ಇಲ್ಲದ ಕಾರಣ ಅದನ್ನೂ ಬಳಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಇದರಿಂದ ಗಾಯಾಳುಗಳ ಸಂಬಂಧಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ವಾಯಿತು. ಸುಮಾರು ₹8.30 ಕೋಟಿ ವೆಚ್ಚದಲ್ಲಿ 30 ಹಾಸಿಗೆಗಳ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹಾಗೂ ಶಾಸಕ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಅವರು ಆಸ್ಪತ್ರೆಯನ್ನು ಲೋಕಾರ್ಪಣೆ ಗೊಳಿಸಿದ್ದಾರೆ. ಆದರೆ ತುರ್ತು ಸಂದರ್ಭದಲ್ಲಿ ವಿದ್ಯುತ್ ಕೈಕೊಟ್ಟಾಗ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗಂಭೀರ ಗಾಯಾಳುಗಳನ್ನು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಒಟ್ನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಆಸ್ಪತ್ರೆ… ತುರ್ತು ಚಿಕಿತ್ಸಾ ವಿಭಾಗವೂ ಇದೆ… ಆದರೆ ತುರ್ತು ಸಮಯದಲ್ಲಿ ವಿದ್ಯುತ್ ಕೈಕೊಟ್ಟರೆ ಪರ್ಯಾಯ ಬೆಳಕಿನ ವ್ಯವಸ್ಥೆಯೇ ಇಲ್ಲದಿರುವುದು ವಿಪರ್ಯಾಸ. ಇನ್ನು ಮುಂದಾದರೂ ಇಂತಹ ಪರಿಸ್ಥಿತಿ ಮರುಕಳಿಸದಂತೆ ವಿದ್ಯುತ್ ಬ್ಯಾಕಪ್, ಇನ್ವರ್ಟರ್ ಹಾಗೂ ಜನರೇಟರ್‌ಗೆ ಅಗತ್ಯ ಇಂಧನದ ವ್ಯವಸ್ಥೆ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಿಜಯಕುಮಾರ ಸಾರವಾಡ
ಇನ್‌ ನ್ಯೂಜ್
ವಿಜಯಪುರ.

Tags:

error: Content is protected !!