ಬೆಳಗಾವಿಯಲ್ಲಿ ಆಟೋ ಚಾಲಕರ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ಅನಧಿಕೃತ ಬೈಕ್ ಟ್ಯಾಕ್ಸಿ ಹಾಗೂ ಆ್ಯಪ್ ಆಧಾರಿತ ಸೇವೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನವೆಂಬರ್ 11 ರಂದು ಜಿಲ್ಲಾದ್ಯಂತ ಆಟೋ ಬಂದ್ ಮಾಡುವುದಾಗಿ ಚಾಲಕರು ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ನಗರದಲ್ಲಿ ಯಾವುದೇ ಅಧಿಕೃತ ಅನುಮತಿಯಿಲ್ಲದೆ ಕಾರ್ಯಾಚರಣೆ ನಡೆಸುತ್ತಿರುವ ರಾಪಿಡೋ, ಓಲಾ ಹಾಗೂ ಉಬೇರ್ ಬೈಕ್ ಟ್ಯಾಕ್ಸಿಗಳು ಮತ್ತು ನಿಯಮಬಾಹಿರ ಎಲೆಕ್ಟ್ರಿಕ್ ಆಟೋಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬೆಳಗಾವಿ ಆಟೋ ಚಾಲಕರ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ನೂರಾರು ಆಟೋ ಚಾಲಕರು, ಅನಧಿಕೃತ ವಾಹನಗಳ ಸಂಚಾರದಿಂದ ಬಡ ಆಟೋ ಚಾಲಕರ ಜೀವನೋಪಾಯಕ್ಕೆ ತೀವ್ರ ಧಕ್ಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಹಸ್ತಾಂತರಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಆಟೋ ಚಾಲಕರ ಸಂಘದ ಸಲಹೆಗಾರ ಸುರೇಶ್ ರಿಜಕನ್ನವರ, ವೈಟ್ ಬೋರ್ಡ್ ದ್ವಿಚಕ್ರ ವಾಹನಗಳನ್ನು ಬೈಕ್ ಟ್ಯಾಕ್ಸಿಯಾಗಿ ಬಳಸಲು ಜಿಲ್ಲಾಧಿಕಾರಿಗಳು ಯಾವುದೇ ಅನುಮತಿ ನೀಡಿಲ್ಲ ಎಂದಿದ್ದರೂ ಆರ್.ಟಿ.ಒ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ಆರು ತಿಂಗಳಿಂದ ಆಟೋ ಚಾಲಕರ ಸಮಸ್ಯೆಗಳ ಕುರಿತು RTO ಅಥವಾ ಪೊಲೀಸ್ ಇಲಾಖೆಯ ಸಭೆಯನ್ನೇ ನಡೆಸಿಲ್ಲ. ಸಾರಿಗೆ ಸಚಿವರ ಮೌನ ಹಾಗೂ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಅಕ್ರಮಕ್ಕೆ ಕಾರಣ ಎಂದು ದೂರಿದ ಅವರು, ತಪ್ಪು ಮಾಡುವ ಆಟೋ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ, ಆದರೆ ಎಲ್ಲ ಆಟೋ ಚಾಲಕರನ್ನು ತಪ್ಪಿತಸ್ಥರಂತೆ ಕಾಣಬಾರದು ಎಂದರು.
ಆಟೋ ಓನರ್ಸ್ ಅಂಡ್ ಡ್ರೈವರ್ಸ್ ಅಸೋಸಿಯೇಷನ್ನ ಕಾನೂನು ಸಲಹೆಗಾರರಾದ ಅಡ್ವೊಕೇಟ್ ಅಕ್ತರ್ ಪಟೇಲ್ ಮಾತನಾಡಿ, ಸಾಲ ಮಾಡಿ ಆಟೋ ಖರೀದಿಸಿ ಜೀವನ ನಡೆಸುತ್ತಿರುವ ಬಡ ಚಾಲಕರಿಗೆ ಈ ಆ್ಯಪ್ ಆಧಾರಿತ ಅಕ್ರಮ ಸೇವೆಗಳಿಂದ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ತಕ್ಷಣವೇ ಈ ಅಕ್ರಮ ಸಂಚಾರಕ್ಕೆ ತಡೆ ನೀಡದಿದ್ದರೆ ನವೆಂಬರ್ 11 ರಂದು ಇಡೀ ಬೆಳಗಾವಿ ಜಿಲ್ಲಾದ್ಯಂತ ಆಟೋ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಆಟೋ ಚಾಲಕರು ಭಾಗಿಯಾಗಿದ್ಧರು.
