Belagavi

ಬಾಡಿಗೆದಾರರ ಗುರುತು ಮತ್ತು ವಿಳಾಸದ ದಾಖಲೆಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಿ; ವಿಜಯ ದೊಡವಾಡ

Share

ಕರ್ನಾಟಕದಲ್ಲಿ ಬಾಡಿಗೆದಾರರ ಪರಿಶೀಲನೆಗೆ ಸಂಬಂಧಿಸಿದ ಸಮಗ್ರ ಕಾನೂನು ಜಾರಿಗೊಳಿಸಿ, ಬಾಡಿಗೆ ಮನೆಗಳಲ್ಲಿ ವಾಸಿಸುವವರ ಗುರುತು ಮತ್ತು ವಿಳಾಸದ ದಾಖಲೆಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಬೇಕು ಎಂದು ವಿಜಯ ದೊಡವಾಡ ಹೇಳಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಸಂಭವಿಸುತ್ತಿರುವ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆಯನ್ನು ಬಲಪಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮನೆ ಮಾಲೀಕರು ಬಾಡಿಗೆದಾರರ ಗುರುತು, ವಿಳಾಸ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಿತ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಇಲಾಖೆಗೆ ಸಲ್ಲಿಸುವ ವ್ಯವಸ್ಥೆ ರೂಪಿಸಬೇಕು ಎಂದರು.
ರಾಜ್ಯದ ಹೊರಗಿನಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವವರನ್ನೂ ಒಳಗೊಂಡಂತೆ, ಎಲ್ಲ ಬಾಡಿಗೆದಾರರಿಗೂ ಸಮಾನವಾಗಿ ಅನ್ವಯಿಸುವ ಪಾರದರ್ಶಕ ಪರಿಶೀಲನಾ ವ್ಯವಸ್ಥೆ ಜಾರಿಗೊಳಿಸಬೇಕು. ಇದರಿಂದ ಅಪರಾಧ ಪ್ರಕರಣಗಳ ತನಿಖೆ, ಆರೋಪಿಗಳ ಪತ್ತೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸರಿಗೆ ಅನುಕೂಲವಾಗಲಿದೆ ಎಂದರು.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಅಪಹರಣ, ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿರುವ ಮನವಿಯಲ್ಲಿ, ಇಂತಹ ಗಂಭೀರ ಘಟನೆಗಳ ಹಿನ್ನೆಲೆಯಲ್ಲಿ ಅಪರಾಧ ತಡೆಗಟ್ಟುವಿಕೆ ಹಾಗೂ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಮುಂದಾಗಬೇಕು ಎಂದರು.

ಗೋವಾ ಸೇರಿದಂತೆ ಇತರ ರಾಜ್ಯಗಳಲ್ಲಿ ಜಾರಿಯಲ್ಲಿರುವ ಬಾಡಿಗೆದಾರರ ಪರಿಶೀಲನೆಗೆ ಸಂಬಂಧಿಸಿದ ಕಾನೂನು ಮತ್ತು ನಿಯಮಗಳನ್ನು ಅಧ್ಯಯನ ಮಾಡಿ, ಕರ್ನಾಟಕಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ರೂಪಿಸಬೇಕು. ಬಾಡಿಗೆದಾರರ ನೋಂದಣಿ, ದಾಖಲೆಗಳ ಪರಿಶೀಲನೆ, ಮನೆ ಮಾಲೀಕರ ಜವಾಬ್ದಾರಿ ಹಾಗೂ ಆನ್‌ಲೈನ್ ಮೂಲಕ ಮಾಹಿತಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದರು.

ವಕೀಲ ಹಣಮಂತ ಹರೋಲಿ ಮಾತನಾಡಿ, ಕರ್ನಾಟಕದಲ್ಲಿ ವಾಸಿಸುವ ಮತ್ತು ಉದ್ಯೋಗ ನಿರ್ವಹಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆ, ನಾಡಿನ ಸಂಸ್ಕೃತಿ ಹಾಗೂ ರಾಜ್ಯದ ಕಾನೂನುಗಳಿಗೆ ಗೌರವ ನೀಡುವ ವಾತಾವರಣ ನಿರ್ಮಿಸಬೇಕು. ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಬಳಕೆಗೆ ಉತ್ತೇಜನ ನೀಡಬೇಕು ಎಂದರು.
ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕರ ಹಕ್ಕುಗಳನ್ನು ಸಮತೋಲನದಲ್ಲಿಟ್ಟುಕೊಂಡು, ರಾಜ್ಯದಲ್ಲಿ ಬಾಡಿಗೆದಾರರ ಪರಿಶೀಲನೆಗೆ ಸಂಬಂಧಿಸಿದ ಸಮಗ್ರ ಕಾನೂನು ಅಥವಾ ಪರಿಣಾಮಕಾರಿ ನಿಯಮಾವಳಿಗಳನ್ನು ಜಾರಿಗೊಳಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದರು.

Tags:

error: Content is protected !!