ಬೆಳಗಾವಿಯ ಬಾಕ್ಸೈಟ್ ರಸ್ತೆಯ ಉಷಾ ಕಾಲನಿಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 16ನೇ ವರ್ಷದ ದಸರಾ (ನವರಾತ್ರಿ) ಮಹೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗುತ್ತಿದೆ. ಇಂದು ಚಂಡಿಕಾ ಹೋಮ ಹಾಗೂ ಕನ್ನಿಕಾ ಪೂಜೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಬೆಳಗಾವಿಯ ಬಾಕ್ಸೈಟ್ ರಸ್ತೆಯ ಉಷಾ ಕಾಲನಿಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಲಾಗಿರುವ ಈ ನವರಾತ್ರಿ ಮಹೋತ್ಸವವು ಕಾರಂಜೀಮಠದ ಶ್ರೀ ಗುರುಸಿದ್ಧ ಸ್ವಾಮಿಗಳು, ಮುರಗೋಡಿನ ಶ್ರೀ ಮಹಾಂತ ದುರುದುಂಡೀಶ್ವರ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು ಹಾಗೂ ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಮುಂದುವರಿದಿದೆ. ಅಕ್ಟೋಬರ್ 11ರಂದು ಮುಂಜಾನೆ ಮಹಾಅಭಿಷೇಕ, ಗಣಹೋಮ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಘಟಸ್ಥಾಪನೆ ನೆರವೇರಿತು. ಅಂದಿನಿಂದ ಇಲ್ಲಿಯವರೆಗೆ ಪ್ರತಿದಿನ ಮಧ್ಯಾಹ್ನ ಚಂಡಿಕಾ ಹೋಮ ಹಾಗೂ ಮಹಾಮಂಗಳಾರತಿ ವಿಧಿವಿಧಾನಗಳು ನಿರಂತರವಾಗಿ ಜರುಗುತ್ತ ಬಂದಿವೆ.
ಉತ್ಸವದ ಪ್ರಮುಖ ಘಟ್ಟವಾಗಿ, ಇಂದು ಅಂದರೆ ಸೋಮವಾರ ದೇವಸ್ಥಾನದಲ್ಲಿ ಅತ್ಯಂತ ಮಂಗಳಕರವಾದ ಕನ್ನಿಕಾ ಪೂಜೆಯನ್ನು ಕಾರಂಜೀಮಠದ ಶ್ರೀ ಗುರುಸಿದ್ಧ ಸ್ವಾಮಿಗಳ ಸಾನ್ನಿಧ್ಯದಲ್ಲಿ ಯಶಸ್ವಿಯಾಗಿ ನೆರವೇರಿತು. ಅನನ್ಯಾ ಮಾಳವದೆ ಸೇರಿದಂತೆ ಇನ್ನುಳಿದ ಕನ್ನಿಕೆಯರ ಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ನಂತರ ಚಂಡಿಕಾ ಹೋಮ ನಡೆಯಿತು.
ನೂರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಾಯಿ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಿದ್ದಾರೆ. ಅಕ್ಟೋಬರ್ 21ರ ಬುಧವಾರದವರೆಗೆ ಈ ವೈಭವೋಪೇತ ಧಾರ್ಮಿಕ ಆಚರಣೆಗಳು ಮುಂದುವರಿಯಲಿದ್ದು, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನ ಸಮಿತಿ ವಿನಂತಿಸಿದೆ.
