Khanapur

ಬಿಜೆಪಿಯವರು ಕಳೆದ ಮೂರು ವರ್ಷಗಳಲ್ಲಿ ಏನು ಅಭಿವೃದ್ಧಿ ಮಾಡಿದರು?: ಡಾ. ಅಂಜಲಿ ನಿಂಬಾಳ್ಕರ್ ಪ್ರಶ್ನೆ

Share

ಖಾನಾಪುರದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬಿಜೆಪಿ ಶಾಸಕರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕವಾಗಿ ಪ್ರಶ್ನೆಗಳನ್ನು ಎತ್ತುವ ಮೂಲಕ ಅವರು ಹಾಲಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಾನಾಪುರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, ತಾವು ಶಾಸಕಿಯಾಗಿದ್ದ ಅವಧಿಯಲ್ಲಿ (೨೦೧೮-೨೩) ಕ್ಷೇತ್ರದ ೧೫೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ರಸ್ತೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದು, ಆದರೆ ಪ್ರಸ್ತುತ ಮೂರು ವರ್ಷಗಳಲ್ಲಿ ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂದು ಆರೋಪಿಸಿದರು. ಮ.ಮಂ. ಡಿಗ್ರಿ ಕಾಲೇಜಿನಿಂದ ರುಮೇವಾಡಿ ಕ್ರಾಸ್‌ವರೆಗಿನ ರಸ್ತೆ ಕಾಮಗಾರಿ ಹೊರತುಪಡಿಸಿ ಇತರೆ ಪ್ರಮುಖ ಕಾಮಗಾರಿಗಳು ಕಳಪೆಯಾಗಿವೆ ಹಾಗೂ ಮೀನು ಮಾರುಕಟ್ಟೆ ಬಳಿಯ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ದೂರಿದರು. ಪಶ್ಚಿಮ ಭಾಗದಲ್ಲಿ ಹಾವಳಿ ಹೆಚ್ಚಿರುವ ಕಾಡಾನೆಗಳಿಂದ ಸಂತ್ರಸ್ತರಾದ ರೈತರಿಗೆ ಹಾಗೂ ಕಬ್ಬು ಬೆಳೆಗಾರರಿಗೆ ಇದುವರೆಗೆ ಏನು ಪರಿಹಾರ ಸಿಕ್ಕಿದೆ ಎಂಬ ಕುರಿತು ಶಾಸಕರು ಶ್ವೇತಪತ್ರ ಹೊರಡಿಸಲಿ ಎಂದು ಸವಾಲುಹಾಕಿದ ಅವರು, ಕುಸಮಳಿ ಕುಡಿಯುವ ನೀರಿನ ಯೋಜನೆ ತಮ್ಮ ಅವಧಿಯಲ್ಲಿ ಮಂಜೂರಾಗಿದ್ದು ಎಂಬ ಸುಳ್ಳು ಮಾಹಿತಿಯನ್ನು ಜನರಿಗೆ ನೀಡಬೇಡಿ ಎಂದು ತಿರುಗೇಟು ನೀಡಿದರು. ಕಾಗೇರಿ ಗ್ರಾಮೀಣ ಭಾಗದ ಶಾಲೆಗಳು ಮತ್ತು ಆಸ್ಪತ್ರೆಗಳ ಅಭಿವೃದ್ಧಿಯ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಉಳಿದ ಅವಧಿಯಲ್ಲಾದರೂ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಿದರೆ ಕಾಂಗ್ರೆಸ್ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ರಾವುತ್, ಮಹಾದೇವ ಕೋಳಿ, ಸಾವಿತ್ರಿ ಮಾದರ್, ತೌಹೀದ್ ಚಾಂದಕನ್ನವರ್ ಹಾಗೂ ಸಾಯಿ ಸುತಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Tags:

error: Content is protected !!