Belagavi

ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಶ್ರೇಷ್ಠವಾದದ್ದು;ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Share

ಬೆಳಗಾವಿಯಲ್ಲಿ 65ನೇ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ವಿವಿಧ ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆಗಳಿಗೆ ಅದ್ಧೂರಿ ಚಾಲನೆ ದೊರೆತಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಶಿಕ್ಷಕರ ಪಾತ್ರ ಅನನ್ಯ ಎಂದಿದ್ದಾರೆ.


ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ 65ನೇ ಶಿಕ್ಷಕರ ದಿನಾಚರಣೆ, ಪ್ರತಿಭಾ ಕಾರಂಜಿ, ಕಲೋತ್ಸವ ಹಾಗೂ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ನೆರವೇರಿತು. ಶ್ರಿಮತಿ ಶೈಲಶ್ರೀ ಶಿಂದೆ ಅವರ ಪ್ರಾರ್ಥನೆ ಹಾಗೂ ಮಹಿಳಾ ಸಿಆರ್‌ಪಿಗಳಿಂದ ವಂದೇ ಮಾತರಂ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಬೆಳಗಾವಿ ಗ್ರಾಮೀಣ BEO ಪುಂಡಲೀಕ ಚವ್ಹಾಣ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ, ಕಲೋತ್ಸವ ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಶಿಕ್ಷಕರ ಮಾರ್ಗದರ್ಶನ ಹಾಗೂ ಆಶೀರ್ವಾದವಿರುತ್ತದೆ ಎಂದರು. ತಾವು ಇಂದು ಈ ಉನ್ನತ ಸ್ಥಾನ ತಲುಪಲು ತಮ್ಮ ಗುರುಗಳು ಕಲ್ಪಿಸಿದ ಶಿಸ್ತು, ಸಂಸ್ಕಾರವೇ ಮುಖ್ಯ ಕಾರಣ ಎಂದು ಸ್ಮರಿಸಿದ ಸಚಿವರು, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಕ್ಷೇಮಾಭಿವೃದ್ಧಿ ಹಾಗೂ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ ಹಿರೇಬಾಗೇವಾಡಿ ಶಾಲಾ ಮಕ್ಕಳಿಂದ ಕೋಲಾಟ ಹಾಗೂ ಕಣಬರ್ಗಿ ಶಾಲಾ ವಿದ್ಯಾರ್ಥಿಗಳಿಂದ ಬ್ಯಾಂಡಿಂಗ್ ಡೆಮೊ ಪ್ರದರ್ಶನ ಜರುಗಿತು. ನಿವೃತ್ತ ಪ್ರಾಧ್ಯಾಪಕ ಡಾ. ವೈ. ಎಂ. ಯಾಕೊಳ್ಳಿ ವಿಶೇಷ ಉಪನ್ಯಾಸ ನೀಡಿದರೆ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ SSLC ಯಲ್ಲಿ ಶೇ.100 ಫಲಿತಾಂಶ ತಂದ ಶಾಲೆಗಳಿಗೆ, ನಿವೃತ್ತ ಶಿಕ್ಷಕರಿಗೆ ಹಾಗೂ ದಾನಿಗಳಿಗೆ ಸನ್ಮಾನ ಸಲ್ಲಿಸಲಾಯಿತು. ಬಿಆರ್‌ಸಿ ದಾನಮ್ಮ ಝಳಕಿ ವಂದನಾರ್ಪಣೆ ನೆರವೇರಿಸಿದರು.

Tags:

error: Content is protected !!