ಬೆಳಗಾವಿಯಲ್ಲಿ ವಿದ್ಯಾರ್ಥಿ ಸಮುದಾಯವನ್ನು ಹಾಳು ಮಾಡುತ್ತಿದ್ದ ಖತರ್ನಾಕ್ ಗಾಂಜಾ ಜಾಲದ ಮೂಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಶಾಲಾ-ಕಾಲೇಜುಗಳ ಹತ್ತಿರವೇ ಯುವಕರಿಗೆ ಡ್ರಗ್ಸ್ ಪೂರೈಸುತ್ತಿದ್ದ ಮೂವರು ಹೆಡೆಮುರಿ ಕಟ್ಟಲಾಗಿದ್ದು, ಮತ್ತೋರ್ವ ಪರಾರಿಯಾಗಿರುವ ಆರೋಪಿಗಾಗಿ ತೀವ್ರ ಹುಡುಕಾಟ ನಡೆದಿದೆ.

ಬೆಳಗಾವಿಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಅಕ್ಷಯಕುಮಾರ ಅಂಕಲಗಿ, ಆದರ್ಶ ಹಿರೇಮಠ ಹಾಗೂ ಮಣಿಕಂಠ ಉಗರಖೋಡಾ ಎಂಬ ಮೂವರು ಯುವಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಆರೋಪಿಗಳಿಂದ ಗಾಂಜಾ, ಬೈಕ್ ಮತ್ತು ಮೊಬೈಲ್ ಸೇರಿದಂತೆ ಒಟ್ಟು 1.80 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕೃತ್ಯದ ಪ್ರಮುಖ ಪೂರೈಕೆದಾರ ಎನ್ನಲಾದ ಮೈತಾಬ್ ಎಂಬಾತ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ.
