Belagavi

ಶಿಕ್ಷಣದಿಂದ ಮನೋಸ್ಥೈರ್ಯ, ಸ್ವಾವಲಂಬನೆ ಸಾಧ್ಯ: ಸುಮನ್ ಕಟ್ಟಿ

Share

ಶಿಕ್ಷಣವು ಜೀವನದಲ್ಲಿ ಮನೋಸ್ಥೈರ್ಯವನ್ನು ತುಂಬುವುದರ ಜತೆಗೆ ಸ್ವಾವಲಂಬಿ ಬದುಕಿಗೆ ದಾರಿ ತೋರಿಸುತ್ತದೆ. ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಜಿಲ್ಲಾ ಆದರ್ಶ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಸುಮನ್ ಶ್ರೀಶೈಲ್ ಕಟ್ಟಿ ಹೇಳಿದರು.

ನಗರದ ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಹಿಂದವಾಡಿಯ ಗೊಮ್ಮಟೇಶ್ ವಿದ್ಯಾಪೀಠದಲ್ಲಿ ಆಯೋಜಿಸಿದ್ದ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎರಡೂ ಸಂಸ್ಥೆಗಳು ನಡೆಸುತ್ತಿರುವ ಸಾಮಾಜಿಕ ಕಾರ್ಯಗಳನ್ನು ಗಮನಿಸಿ ತಮಗೂ ಪ್ರೇರಣೆ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳ ಸೇವೆಯನ್ನು ಅವರು ಶ್ಲಾಘಿಸಿದರು.

‘ಸಂಗೀತ ರತ್ನ’ ಖ್ಯಾತಿಯ ಕಿಣೆಯ ಶಂಕರ ಲಕ್ಷ್ಮಣ ಪಾಟೀಲ ಗುರುಗಳು ಮಾತನಾಡಿ, ಜೀವನದಲ್ಲಿ ಆಧ್ಯಾತ್ಮಿಕ ಚಿಂತನೆ ಹಾಗೂ ಗುರುಸ್ಮರಣೆಗೆ ಮಹತ್ವ ನೀಡಬೇಕು ಎಂದರು. ಪ್ರತಿನಿತ್ಯ ಭಜನೆ, ಶ್ಲೋಕ ಹಾಗೂ ದೇವರ ನಾಮಸ್ಮರಣೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದರ ಜತೆಗೆ ಮಕ್ಕಳಲ್ಲಿ ಏಕಾಗ್ರತೆ ಮತ್ತು ಉತ್ತಮ ಚಿಂತನೆ ಬೆಳೆಸಲು ಸಹಕಾರಿಯಾಗುತ್ತದೆ. ಆದ್ದರಿಂದ ಮಕ್ಕಳು ತಮ್ಮ ದಿನನಿತ್ಯದ ಅಧ್ಯಯನದೊಂದಿಗೆ ಭಗವದ್ಗೀತೆ ಪಠಣ, ಶ್ಲೋಕ ಹಾಗೂ ದೇವರ ನಾಮಸ್ಮರಣೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸನ್ಮಾನ ಸ್ವೀಕರಿಸಿ ವೃಷಭ ಸಂಜಯ್ ಪಾಟೀಲ ಮಾತನಾಡಿ, ಎರಡೂ ಸಂಸ್ಥೆಗಳು ನಡೆಸುತ್ತಿರುವ ಸಾಮಾಜಿಕ ಸೇವಾ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಗಳ ಸಮಾಜಮುಖಿ ಕಾರ್ಯಗಳಿಗೆ ಅಗತ್ಯವಿರುವ ಸಹಾಯ–ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆದರ್ಶ ಶಿಕ್ಷಕಿ ಪ್ರಶಸ್ತಿ ಪಡೆದ ಸುಮನ್ ಶ್ರೀಶೈಲ್ ಕಟ್ಟಿ, ಸಂಗೀತ ರತ್ನ ಶಂಕರ ಲಕ್ಷ್ಮಣ ಪಾಟೀಲ ಹಾಗೂ ಗೊಮ್ಮಟೇಶ್ ವಿದ್ಯಾಪೀಠದ ಅಧ್ಯಕ್ಷ ವೃಷಭ ಸಂಜಯ್ ಪಾಟೀಲ ಅವರನ್ನು ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ಆರ್ಷ ಆಶ್ರಮದ ಹೆಣ್ಣು ಮಕ್ಕಳು, ಎರಡೂ ಸಂಸ್ಥೆಗಳ ಸದಸ್ಯರು ಹಾಗೂ ಡಾ. ರಾಜೇಂದ್ರ ಮಠದ್ ಗುಡಗನಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಲ್ ಮಠದ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ರತ್ನಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಮತಾ ಅಂಟಿನ ಹಾಗೂ ಅನಿತಾ ಜಕ್ಕಣ್ಣವರ ಅತಿಥಿಗಳನ್ನು ಪರಿಚಯಿಸಿದರು. ಗೀತಾ ಎಮ್ಮಿ ನಿರೂಪಿಸಿದರು. ಮೈನಾ ಕುಲಕರ್ಣಿ ವಂದಿಸಿದರು.

Tags:

error: Content is protected !!