Belagavi

ಮುರುಗೋಡನಲ್ಲಿ ಸರ್ಕಾರಿ ಜಮೀನು ಮರಗಳ ಮಾರಣಹೋಮ

Share

ಸರ್ಕಾರಿ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆಯ ಕರಾಳ ಮುಖದ ಅಡಿಯಲ್ಲಿ ಸಾವಿರಾರು ಮರಗಳ ಮಾರಣಹೋಮ ನಡೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿರೋಧ ಪಕ್ಷಗಳ ಮುಖಂಡರು ನೇರ ಸ್ಥಳ ಪರಿಶೀಲನೆ ನಡೆಸಿ, ಮೌನ ವಹಿಸಿರುವ ಜಿಲ್ಲಾ ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ.

ಬೈಲಹೊಂಗಲ ತಾಲೂಕಿನ ಮುರುಗೋಡ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಸಾವಿರಾರು ಮರಗಳನ್ನು ಕಡಿದು ಹಾಕಿರುವ ಗಂಭೀರ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹಾಗೂ ಮುಖಂಡ ಗುರು ಮೆಟಗುಡ್ಡ ನೇತೃತ್ವದ ನಿಯೋಗವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಲಕ್ಷಾಂತರ ಮೌಲ್ಯದ ಪರಿಸರ ಸಂಪತ್ತು ನಾಶವಾಗುತ್ತಿದೆ ಎಂದು ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಅಕ್ರಮ ಚಟುವಟಿಕೆಗಳ ಕುರಿತು ಸ್ಥಳೀಯ ಸಾರ್ವಜನಿಕರು ಮತ್ತು ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ದೂರುಗಳನ್ನು ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಹಾಗೂ ಅಧಿಕಾರಿಗಳು ಮೌನ ವಹಿಸಿ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಮುಖಂಡರು ಕಿಡಿಕಾರಿದರು. ಪರಿಸರ ನಾಶ ಮಾಡುತ್ತಿರುವ ಹಾಗೂ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Tags:

error: Content is protected !!