ಖಾನಾಪೂರ ತಾಲೂಕಿನ ಚೋರ್ಲಾ ಗ್ರಾಮದ ಬಹುದಿನಗಳ ಸಾರಿಗೆ ಬೇಡಿಕೆ ಕೊನೆಗೂ ಈಡೇರಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನಿರಂತರ ಪ್ರಯತ್ನದ ಫಲವಾಗಿ ಗ್ರಾಮಕ್ಕೆ ಬಸ್ ಸೇವೆ ಆರಂಭವಾಗಿದ್ದು, ವಿದ್ಯಾರ್ಥಿಗಳು ಮತ್ತು ಮಹಿಳೆಯರಲ್ಲಿ ಸಂತಸ ಮೂಡಿಸಿದೆ.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸತತ ಪ್ರಯತ್ನದಿಂದ ಖಾನಾಪೂರ ತಾಲೂಕಿನ ಚೋರ್ಲಾ ಗ್ರಾಮಕ್ಕೆ ನೂತನ ಬಸ್ ಸೇವೆ ಅಧಿಕೃತವಾಗಿ ಆರಂಭಗೊಂಡಿದೆ. ಪ್ರಾಧಿಕಾರದ ತಾಲೂಕಾಧ್ಯಕ್ಷ ಸೂರ್ಯಕಾಂತ ಕುಲಕರ್ಣಿ, ಸಮಿತಿ ಸದಸ್ಯೆ ಪ್ರಿಯಾಂಕಾ ಗಾವ್ಕರ್ ಹಾಗೂ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ್ ಅವರ ನಿರಂತರ ಪತ್ರ ವ್ಯವಹಾರ ಮತ್ತು ಹಿರಿಯ ಅಧಿಕಾರಿಗಳೊಂದಿಗಿನ ಸಭೆಗಳ ಫಲವಾಗಿ ಈ ಸೌಲಭ್ಯ ದೊರೆತಿದೆ. ಸದ್ಯ ಖಾನಾಪೂರ ಬಸ್ ನಿಲ್ದಾಣದಿಂದ ಬೆಳಗ್ಗೆ 9.25ಕ್ಕೆ ಹೊರಡುವ ಬಸ್ 10.30ಕ್ಕೆ ಚೋರ್ಲಾ ತಲುಪಲಿದ್ದು, ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ದಿನಗಳಲ್ಲಿ ಸಮಯ ಹಾಗೂ ಮಾರ್ಗದಲ್ಲಿ ಸೂಕ್ತ ಬದಲಾವಣೆ ಮಾಡಲಾಗುವುದು. ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಮಿತಿ ಸದಸ್ಯೆ ಪ್ರಿಯಾಂಕಾ ಗಾವ್ಕರ್, ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದು, ಗ್ರಾಮದಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದೆ.
