ಖಾನಾಪುರ ತಾಲೂಕಿನ ನಿಲಾವಡೆಯಲ್ಲಿ ನೂತನ ಕೆಎಮ್‌ಎಫ್ ಹಾಲು ಡೈರಿಯು ಲೋಕಾರ್ಪಣೆಗೊಂಡಿದ್ದು, ರೈತರು ಹೈನುಗಾರಿಕೆಯೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಾಜಿ ಶಾಸಕ ಅರವಿಂದ್ ಪಾಟೀಲ್ ಕರೆ ನೀಡಿದ್ದಾರೆ. ಸರ್ಕಾರದ ಯೋಜನೆಗಳ ಸದುಪಯೋಗ ಪಡೆಸಿಕೊಳ್ಳುವ ಮೂಲಕ ಸ್ಥಳೀಯವಾಗಿ ಹೈನುಗಾರಿಕೆ ಹಾಗೂ ಕೃಷಿ ವಲಯವನ್ನು ಅಭಿವೃದ್ಧಿಪಡಿಸುವಂತೆ ಅವರು ಈ ಸಂದರ್ಭದಲ್ಲಿ ರೈತರಿಗೆ ಸಲಹೆ ಮಾಡಿದರು.

ಖಾನಾಪುರ ತಾಲೂಕಿನ ನಿಲಾವಡೆ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ಕೆಎಮ್‌ಎಫ್ ಹಾಲು ಡೈರಿಯನ್ನು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವರು ಉದ್ಘಾಟಿಸಿ ಮಾತನಾಡಿದರು. ರೈತರು ಕೇವಲ ಬೇಸಾಯವನ್ನಷ್ಟೇ ನಂಬಿಕೊಳ್ಳದೆ ದನಕರುಗಳನ್ನು ಸಾಕುವ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ಅವರು ತಿಳಿಸಿದರು. ಅಲ್ಲದೆ, ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆಯುವ ಮೂಲಕ ಈ ಪ್ರದೇಶದಲ್ಲಿ ಕೆಎಮ್‌ಎಫ್ ಡೈರಿಯ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕೆಂದರು. ಸರ್ಕಾರದ ವಿವಿಧ ಕೃಷಿ ಮತ್ತು ಹೈನುಗಾರಿಕಾ ಯೋಜನೆಗಳ ಲಾಭವನ್ನು ಸ್ಥಳೀಯ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಈ ಡೈರಿಯು ಗ್ರಾಮದ ರೈತರ ಆರ್ಥಿಕ ಅಭಿವೃದ್ಧಿಗೆ ಮುನ್ನುಡಿಯಾಗಲಿ ಎಂದು ಶುಭ ಹಾರೈಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ನಿಲಾವಡೆ ಗ್ರಾಮದ ರೈತರು, ಹಿರಿಯರು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.
