Belagavi

ಸರ್ಕಾರದ ಆದೇಶ ಪಾಲಿಸಿ ಪಾಲಿಕೆ ಸಭೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಜಾರಿಗೊಳಿಸಿ

Share

ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಹಾಗೂ ಗಡಿ ವಿವಾದದ ಕುರಿತು ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಒತ್ತಾಯಿಸಲಾಗಿದೆ. ಈ ಸಂಬಂಧ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ. ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಪಾಲಿಕೆ ಆಯುಕ್ತರಿಂದ ವರದಿ ಪಡೆಯುವಂತೆ ಆಗ್ರಹಿಸಿದೆ.

ಬೆಳಗಾವಿ ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಮತ್ತು ಗಡಿ ವಿವಾದ ಪರಿಹಾರಕ್ಕೆ ಮಹಾನಗರ ಆಯೋಗದ ವರದಿಯೇ ಅಂತಿಮ ಎಂಬ ಗೊತ್ತುವಳಿಯನ್ನು ಅಂಗೀಕರಿಸಬೇಕೆಂದು ರಾಜ್ಯ ಸರ್ಕಾರವು ಕಳೆದ ಆಗಸ್ಟ್ 29 ಹಾಗೂ ಸೆಪ್ಟೆಂಬರ್ 4 ರಂದು ಸ್ಪಷ್ಟ ಆದೇಶಗಳನ್ನು ಹೊರಡಿಸಿದೆ. ಸರ್ಕಾರದ ಆದೇಶ ಹೊರಬಿದ್ದು ಹದಿನೈದು ದಿನಗಳು ಕಳೆದಿದ್ದರೂ ಪಾಲಿಕೆಯ ಪರಿಷತ್ ಸಭೆಯ ದಿನಾಂಕವನ್ನು ಇದುವರೆಗೆ ನಿಗದಿಪಡಿಸಿಲ್ಲ. ನಿಯಮದಂತೆ ಸಭೆ ಆರಂಭವಾಗುವುದಕ್ಕೂ ಐದು ದಿನಗಳ ಮುಂಚಿತವಾಗಿ ಸಭೆಯ ಅಜೆಂಡಾ ಪ್ರಕಟವಾಗಬೇಕಿದ್ದು, ಮುಂಬರುವ ಅಜೆಂಡಾದಲ್ಲಿ ಸರ್ಕಾರದ ಆದೇಶದಂತೆ ಕರ್ನಾಟಕ ಪರ ಗೊತ್ತುವಳಿಯನ್ನು ಕಡ್ಡಾಯವಾಗಿ ಸೇರಿಸಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಒಂದು ವೇಳೆ ಅಜೆಂಡಾದಲ್ಲಿ ಈ ಗೊತ್ತುವಳಿಯನ್ನು ಸೇರಿಸದಿದ್ದಲ್ಲಿ, ಪಾಲಿಕೆಯಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ಕೂಡಲೇ ಪಾಲಿಕೆ ಆಯುಕ್ತರಿಂದ ಸಮಗ್ರ ವರದಿಯನ್ನು ಪಡೆದುಕೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ. ಅವರಿಗೆ ಸಮಿತಿಯ ಮುಖಂಡರು ಮನವಿ ಸಲ್ಲಿಸಿದರು. ಸರ್ಕಾರದ ಆದೇಶದ ಅನುಷ್ಠಾನದಲ್ಲಿ ಪಾಲಿಕೆ ಆಯುಕ್ತರ ಪಾತ್ರ ಮಹತ್ವದ್ದಾಗಿದ್ದು, ಈ ವಿಚಾರದಲ್ಲಿ ಯಾವುದೇ ವಿಳಂಬವಾಗದಂತೆ ಎಚ್ಚರಿಕೆ ವಹಿಸಲು ಮೇಲಧಿಕಾರಿಗಳು ಸೂಕ್ತ ಸೂಚನೆ ನೀಡಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಅಶೋಕ್ ಚಂದರಗಿ, ಮಹಾದೇವ ತಳವಾರ, ಬಲರಾಮ್ ಮಾಸೇನಟ್ಟಿ, ಶ್ರೀನಿವಾಸ ತಾಳೂಕರ, ಮಲ್ಲಪ್ಪ ಗುಡಗೇನಟ್ಟಿ, ರಾಜು ಕೋಲಾ, ಸಾಗರ ಪೂಜಾರಿ, ಎಸ್.ಎಸ್. ಮೂಕನವರ ಸೇರಿದಂತೆ ಕನ್ನಡಪರ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

error: Content is protected !!